ಮೈಸೂರು: ಮೈಸೂರನ್ನು ಬಲಿಷ್ಠ, ಸಮಾನತೆ ಮತ್ತು ಪ್ರಗತಿಪರ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಅನಿತಾ ಹ್ಯೂಮ್ಯಾನಿಟೇರಿಯನ್ ಫೌಂಡೇಶನ್ ನೇತೃತ್ವದಲ್ಲಿ ರೂಪುಗೊಂಡಿರುವ ಮೈಸೂರು ಇಂಟಿಗ್ರೇಟೆಡ್ ಟಾಸ್ಕ್ ಫೋರ್ಸ್ ನ ಮೊದಲ ಸುತ್ತಿನ ಚರ್ಚೆ ನಡೆಯಿತು.
ದಸರಾಕ್ಕೂ ಮುನ್ನ ಮೈಸೂರಿನಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಿಮಿಕ್ರಿ ದಯಾನಂದ್, ಮಹೇಂದ್ರ ಸಿಂಗ್, ಸುರೇಶ್ ಬಾಬು, ಡಾ. ಶ್ಯಾಮ್ ಪ್ರಸಾದ್ ಶೆಟ್ಟಿ, ಬೆಸಿನ ಮಹರ್ಷಿ, ಜಯಪ್ರಕಾಶ್, ತ್ರಿವೇಣಿ, ಶ್ವೇತಾ, ಗುರುದತ್, ಡಾ. ಅನಿತಾ ಪ್ರಸಾದ್, ಅಶ್ವಿನಿ ಮತ್ತು ಸರಸ್ವತಿ ಸೇರಿದಂತೆ ವಿವಿಧ ಕ್ಷೇತ್ರಗಳ ನಾಗರಿಕರು, ಸಾಮಾಜಿಕ ಕಾರ್ಯಕರ್ತರು ಮತ್ತು ವೃತ್ತಿಪರರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಸಾಮಾಜಿಕ ಪರಿಣಾಮ, ಸಮುದಾಯ ಅಭಿವೃದ್ಧಿ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತಿರುವ ವ್ಯಕ್ತಿ-ಸಂಸ್ಥೆಗಳನ್ನು ಗುರುತಿಸಿ ಗೌರವಿಸಲು ತೀರ್ಮಾನಿಸಲಾಯಿತು.
ಈ ಕುರಿತು ಮಾತನಾಡಿದ ಡಾ. ಅನಿತಾ ಪ್ರಸಾದ್, ಎಂಐಟಿಎಫ್ ಉದ್ದೇಶ ಮೈಸೂರಿನ ವಿವಿಧ ಸಮಸ್ಯೆಗಳನ್ನು ಗುರುತಿಸಿ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಲು ನಾಗರಿಕರು, ಸಂಸ್ಥೆಗಳು, ಕಾರ್ಪೊರೇಟ್ಗಳು ಮತ್ತು ಸಾಮಾಜಿಕ ನಾಯಕರನ್ನು ಒಂದೇ ವೇದಿಕೆಗೆ ತರುವುದಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಬದಲಾವಣೆ ಕೇವಲ ಸರ್ಕಾರ ಅಥವಾ ಒಂದೇ ಸಂಸ್ಥೆಯಿಂದ ಸಾಧ್ಯವಿಲ್ಲ. ನಾಗರಿಕರು, ಕಾರ್ಪೊರೇಟ್ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಶಾಶ್ವತ ಬದಲಾವಣೆ ಸಾಧ್ಯ ಎಂಬ ನಂಬಿಕೆಯೊಂದಿಗೆ ಫೌಂಡೇಶನ್ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಮೈಸೂರಿನ ಅಭಿವೃದ್ಧಿ ಮತ್ತು ಸಾಮಾಜಿಕ ಒಳಿತಿಗಾಗಿ ಸಹಭಾಗಿತ್ವ ಮತ್ತು ಜನಸಹಭಾಗಿತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,ಈ ಕುರಿತು ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.
