ಮೈಸೂರು: ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನು ಅವತರಿಸಿದ ಪುಣ್ಯ ದಿನವಾದ ‘ಶ್ರೀ ರಾಮನವಮಿ’ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಸಾರ್ವಜನಿಕರಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಳಗದ ಅಧ್ಯಕ್ಷರಾದ ಸಿ. ಸಂದೀಪ್ ಅವರು, “ಚೈತ್ರಮಾಸ ಶುಕ್ಲಪಕ್ಷದ ಒಂಬತ್ತನೆಯ ದಿನವಾದ ಇಂದು ಜಗತ್ತಿಗೆ ಆದರ್ಶಪ್ರಾಯನಾದ ಶ್ರೀರಾಮನ ಜನ್ಮದಿನ ಎಂದು ಹೇಳಿದರು.
ಮರ್ಯಾದ ಪುರುಷೋತ್ತಮನ ಸದ್ಗುಣಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಸಮಾಜದ ಹಿತಕ್ಕಾಗಿ ಶ್ರಮಿಸೋಣ ಎಂದು ಸಂದೀಪ್ ಅವರು ಕರೆ ನೀಡಿದರು.
ಪ್ರಭುವಿನ ಅನುಗ್ರಹದಿಂದ ಎಲ್ಲೆಡೆ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ. ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಿ, ಪ್ರಸ್ತುತ ತೀವ್ರವಾಗಿರುವ ಬಿಸಿಲಿನ ಬೇಗೆಯಿಂದ ಸಕಲ ಜೀವರಾಶಿಗಳಿಗೂ ಮುಕ್ತಿ ಸಿಗುವಂತಾಗಲಿ. ಮಳೆರಾಯನ ಆಗಮನದಿಂದ ನಾಡಿನ ಕೃಷಿ ಭೂಮಿ ಹಸಿರಾಗಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್, ದೂರ ರಾಜಣ್ಣ, ಸುರೇಶ್, ಜತ್ತಿ ಪ್ರಸಾದ್, ವಿಜಯ್ ಕುಮಾರ್, ಅಂಬಳೆ ಶಿವಣ್ಣ, ರಾಮ್ ಅರಸ್, ಬಸವರಾಜು, ಪ್ರಭು ಶಂಕರ್, ಮೋಹನ್, ಶಿವಲಿಂಗ ಸ್ವಾಮಿ, ಶಿವಪ್ರಸಾದ್, ಗಿರೀಶ್ ಪಾರ್ವತಿ, ಮಧುಸೂಧನ್, ಸಂದೇಶ್, ಸತ್ಯರಾಜ್, ನರಸಿಂಹ ಸೇರಿದಂತೆ ಶ್ರೀರಾಮ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.
