(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಇದೇ ಮೇ 17 ರಿಂದ 21 ರೊಳಗೆ ಸುಪ್ರಸಿದ್ದ ಜಗನ್ಮೋಹನ ಶ್ರೀರಂಗನಾಥಸ್ವಾಮಿ (ಮಧ್ಯರಂಗ) ದೇವಾಲಯ ಲೋಕಾರ್ಪಣೆಯಾಗಬೇಕಿದ್ದು, ಅಗತ್ಯ ಸಿದ್ಧತೆ ಮಾಡಿ ಕೊಳ್ಳುವಂತೆ ಅಧಿಕಾರಿಗಳಿಗೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ಕಳೆದ ಐದಾರು ವರ್ಷಗಳಿಂದ (2021) ಪ್ರಾಚ್ಯವಸ್ತು ಇಲಾಖೆ ವತಿಯಿಂದ 2.58 ಕೋಟಿ ರೂಪಾಯಿ ವೆಚ್ಚದಲ್ಲಿ ತಾಲ್ಲೂಕಿನ ಶಿವನಸಮುದ್ರದ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿದೆ. ದೇವಾಲಯದ ಸುತ್ತುಗೋಡೆ ದುರಸ್ತಿ, ಗರ್ಭಗುಡಿ ಚಪ್ಪರ ನಿರ್ಮಾಣ, ದರ್ಶನಕ್ಕೆ ನಿಲ್ಲುವ ಭಕ್ತರ ಕ್ಯೂ ಲೈನ್ ನಿರ್ಮಾಣಕ್ಕೆ ಸ್ಟೇನ್ಲೆಸ್ ಸ್ಟೀಲ್ ಅಳವಡಿಕೆ, ದೇವಾಲಯದಲ್ಲಿ ಅಳವಡಿಸಲಾಗಿರುವ ಕಲ್ಲುಗಳ ಬಣ್ಣ ಮಾಸಿದ್ದು ಎಲ್ಲಾ ಕಲ್ಲುಗಳಿಗೂ ಸ್ಯಾನ್ ಬ್ಲಾಸ್ಟ್ ಮಾಡಿಸುವ ಮೂಲಕ ಕಾಮಗಾರಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಆಂಧ್ರ ಮೂಲದ ದಾನಿಗಳಾದ ಎ ಎಂ ಆರ್ ಗ್ರೂಪ್ ನವರು ಸುಮಾರು 1.10 ಕೋಟಿ ವೆಚ್ಚದಲ್ಲಿ ಶ್ರೀರಂಗನಾಯಕಿ ಅಮ್ಮನವರ ದೇವಾಲಯ ಪುನರ್ ನಿರ್ಮಾಣ ಮಾಡಿದ್ದಾರೆ,ಜತೆಗೆ ರಂಗನಾಥಸ್ವಾಮಿ ದೇವಾಲಯಕ್ಕೆ ವಿದ್ಯುದ್ದಿಕರಣ ಮಾಡಿಸಿದ್ದಾರೆ,ದೇವಾಲಯದ ವತಿಯಿಂದ ಸುಮಾರು 1.25 ಕೋಟಿ ವೆಚ್ಚದಲ್ಲಿ ದೇವಾಲಯದ ಸುತ್ತ ನೆಲಹಾಸು ಹಾಗೂ ರಾಜಗೋಪುರ, ವಿಮಾನ ಗೋಪುರ ಹಾಗೂ ಯೋಗ ಶಾಲೆಗೆ ಬಣ್ಣ ಬಳಿಯುವ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ದಾನಿಯೊಬ್ಬರು ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ದೇವಾಲಯದ ಗರ್ಭ ಗುಡಿ ಬಾಗಿಲು, ಮುಖ್ಯ ದ್ವಾರ, ವೈಕುಂಠ ದ್ವಾರದ ಬಾಗಿಲು ಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ, ವಿವಿಧ ಭಕ್ತಾಧಿಗಳಿಂದ ಸುಮಾರು 5 ಲಕ್ಷ ರೂಪಾಯಿ ವೆಚ್ಚದಲ್ಲಿ ರಂಗನಾಥಸ್ವಾಮಿ ದೇವಾಲಯದ ಒಳಗಡೆ ಇರುವ ವೀರ ಪಾಲಕರ ಗುಡಿಗಳಿಗೆ ಪ್ರತ್ಯೇಕವಾಗಿ 10 ಬಾಗಿಲು ಅಳವಡಿಸಲಾಗಿದೆ.
ಪ್ರಾಚ್ಯವಸ್ತು ಇಲಾಖೆ ಹಾಗೂ ದಾನಿಗಳ ನೆರವಿನಿಂದ ಸುಮಾರು 5.38 ಕೋಟಿ ರೂಗೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ದಾರ ಹಾಗೂ ಪುನರ್ ನಿರ್ಮಾಣವಾಗಿರುವ ದೇವಾಲಯಗಳಲ್ಲಿ ಸಣ್ಣಪುಟ್ಟ ಕೆಲಸ ಬಿಟ್ಟರೆ ಈ 2 ದೇವಾಲಯಗಳ ಕಾಮಗಾರಿ ಈಗಾಗಲೇ ಬಹುತೇಕ ಮುಕ್ತಾಯ ಗೊಂಡಿದೆ ಎಂದು ತಿಳಿಸಿದರು.
ದೇವಾಲಯ ಲೋಕಾರ್ಪಣೆಗೆ ಸಿದ್ಧಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಜಿಲ್ಲಾಧಿಕಾರಿ ಶ್ರೀ ರೂಪ ಅವರ ಜೊತೆ ಶಿವನಸಮುದ್ರದ ಶ್ರೀ ರಂಗನಾಯಕಿ ಸಮೇತ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಶಾಸಕರು ಪರಿಶೀಲನೆ ನಡೆಸಿದರು.
ನಂತರ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಜ ಮಂಜುನಾಥ್, ಇಲ್ಲಿನ ಜಗನ್ಮೋಹನ ರಂಗನಾಥಸ್ವಾಮಿ ದೇವಾಲಯದ ಜೀರ್ಣೋದಾರ ಕಾಮಗಾರಿ ಹಾಗೂ ರಂಗನಾಯಕಿ ಅಮ್ಮನವರ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗಳು ಪೂರ್ಣ ಗೊಂಡಿರುವುದರಿಂದ ದೇವಾಲಯವನ್ನು ಲೋಕಾರ್ಪಣೆ ಮಾಡಿ ಜನಸಾಮಾನ್ಯರ ದರ್ಶನಕ್ಕೆ ನೀಡಬೇಕಾಗಿದೆ. ಮೇ 17 ರಿಂದ 21 ರೊಳಗೆ ದೇವಾಲಯಗಳ ಸಂಪ್ರೊಕ್ಷಣೆ ಮಾಡಲು ಆಗಮಿಕರು ದಿನಾಂಕ ಗುರುತಿಸಿದ್ದಾರೆ ಎಂದು ತಿಳಿಸಿದರು.
ಈ ಸಂಬಂಧ ಈ ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆ ಕರೆದು ಚರ್ಚಿಸಿ ಅಂತಿಮವಾಗಿ ದಿನಾಂಕ ನಿಗದಿ ಪಡಿಸಲಾಗುವುದು ಹಾಗೂ ಯಾವ ಇಲಾಖೆಗೆ ಏನು ಜವಾಬ್ದಾರಿ ನಿರ್ವಹಿಸಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಉಳಿದಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಕೂಡಲೇ ಮುಗಿಸಿ, ರಾಜಗೋಪುರ, ವಿಮಾನ ಗೋಪುರ ಹಾಗೂ ಯೋಗ ಶಾಲೆಗೆ ಬಣ್ಣ ಬಳಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದ ಅವರು ಹಳೆ ವೈಭವ ಮರುಕಳಿಸುವಂತಹ ವಾತಾವರಣ ನಿರ್ಮಾಣ ಮಾಡಲು ದೇವಸ್ಥಾನದ ಮುಂಭಾಗ ಇರುವ ರಾಜಭೀದಿಯನ್ನು ದೇವಸ್ಥಾನದ ಮುಂಭಾಗದಿಂದ ಹನ್ನೆರಡು ಕಾಲು ಮಂಟಪದವರೆಗೆ ಪುನರುಜ್ಜೀವನಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲ ಉಪವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ,ತಹಸೀಲ್ದಾರ್ ಬಸವರಾಜು, ಇಒ ಗುರುಶಾಂತಪ್ಪ, ಲೋಕೋಪಯೋಗಿ ಎಇಇ ಪುರುಷೋತ್ತಮ್, ಕೆ.ಆರ್. ಐ.ಡಿ.ಎಲ್ ನ ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರದ ಇಇ ರವಿಕುಮಾರ್, ಧಾರ್ಮಿಕ ದತ್ತಿ ಇಲಾಖೆಯ ಸುರೇಶ್, ಮುಖಂಡರುಗಳಾದ ಸಿಂಗನಲ್ಲೂರು ರಾಜಣ್ಣ, ಪಾಳ್ಯ ಗೋಪಾಲ ನಾಯ್ಕ, ಚನ್ನಲಿಂಗನಹಳ್ಳಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.


