ಮೈಸೂರು: ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅವರು ಇಂದು ಮುಂಜಾನೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರಿಗೆ 77 ವರ್ಷಗಳಾಗಿತ್ತು,ಅವರು ಬೆಳಗಿನಜಾವ ಜಯದೇವ ಆಸ್ಪತ್ರೆಯಲ್ಲಿ ನಿಧನರಾದರು.
ಮೈಸೂರಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಅತ್ಯಂತ ಚಿರಪರಿಚಿತರಾಗಿದ್ದ ಅವರ ನಿಧನವು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
1948ರ ಸೆಪ್ಟೆಂಬರ್ 11 ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಡ್ಡಿಕೆರೆಯಲ್ಲಿ ಜನಿಸಿದ ಅವರು, ತಂದೆ ಸೋಮೇಗೌಡ, ತಾಯಿ ಹಾಲಮ್ಮ. ಗೌಡಹಳ್ಳಿ, ದಾರದಹಳ್ಳಿ, ಮೂಡಿಗೆರೆ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಕಾನೂನು ಪದವಿ ಪಡೆದರು. ವೃತ್ತಿಯಲ್ಲಿ ವಕೀಲರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಸೇವಕರಾಗಿದ್ದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಎರಡು ಬಾರಿ (2008-2011 ಮತ್ತು 2021-2026) ಆಯ್ಕೆಯಾಗಿದ್ದ ಏಕೈಕ ಅಧ್ಯಕ್ಷರಾಗಿದ್ದರು. ಅವರ ಮೊದಲ ಅವಧಿಯಲ್ಲಿ 3 ವರ್ಷದಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮಗಳು, ಎರಡನೇ ಅವಧಿಯಲ್ಲಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಪರಿಷತ್ತನ್ನು ಮನೆ ಮನೆಗೆ ತಲುಪಿಸಿದ್ದರು.
ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನ, ಅರಮನೆ ಉತ್ತರ ದ್ವಾರದ ನಗರ ಘಟಕ ಕಚೇರಿ, ಕುವೆಂಪು ಪುತ್ಥಳಿ ಸ್ಥಾಪನೆ ಸೇರಿದಂತೆ ಹಲವು ಮಹತ್ವದ ಕಾರ್ಯಗಳಲ್ಲಿ ಅವರ ಪಾತ್ರ ಅಪಾರ.
ಗೋಪಾಲ್ ಅವರು ಪತ್ನಿ ನಿವೃತ್ತ ನೇತ್ರ ತಜ್ಞೆ ಡಾ. ಅನುಸೂಯಾ ಗೋಪಾಲ್, ಪುತ್ರಿ ಮಾಲಾ, ಅಳಿಯ ಭವಾನಿ ಶಂಕರ್, ಮೊಮ್ಮಕ್ಕಳು,ಸಾಹಿತ್ಯಾಭಿಮಾನಿಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
