ಬೆಂಗಳೂರು: ಅಸಮಾನತೆ ಇರುವ ಸಮಾಜದಲ್ಲಿ ಬಡವ,ಬಲ್ಲಿದ ಎನ್ನದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಸಮಾನತೆ, ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ವತಿಯಿಂದ ಕೆಇಬಿ ಇಂಜಿನಿಯರ್ ಅಸೋಸಿಯೇಷನ್ ರಜತ ಮಹೋತ್ಸವ ಭವನ ದಲ್ಲಿ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರ ಹಾಗೂ 17 ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಸಿಎಂ ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವೆಲ್ಲವೂ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ ಸಾಧ್ಯ ಎಂದು ಹೇಳಿದರು.
ಸಮಾಜದ ಜನರ ಹಿತ ಕಾಪಾಡುವುದು ನಮ್ಮೆಲ್ಲರ ಕೆಲಸ. ನಾಗರಿಕ ಸುರಕ್ಷಾ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಕಾಯ್ದೆಯ ಸೆಕ್ಷನ್ 8 ಮತ್ತು 9 ರ ಪ್ರಕಾರ ಅಭಿಯೋಜಕರನ್ನು ವಿಂಗಡಿಸಿ, ಕರ್ತವ್ಯಗಳನ್ನು ಹೇಳಿದ್ದಾರೆ. ಆರೋಪಿಗಳ ಹಕ್ಕುಗಳನ್ನು ಸಂರಕ್ಷಿಸಬೇಕೆಂದು ನಿಯಮ ರೂಪಿಸಿದೆ. ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಸಿಎಂ ತಿಳಿಸಿದರು.
ಆರೋಪಿಗಳ ಪರವಾಗಿರುವ ಸಾಕ್ಷ್ಯಾಧಾರಗಳನ್ನೂ ನ್ಯಾಯಾಲಯದ ಗಮನಕ್ಕೆ ತರುವುದು ಅಭಿಯೋಜಕರ ಆದ್ಯ ಕರ್ತವ್ಯ. ತನಿಖಾಧಿಕಾರಿಗಳ ಜೊತೆ ಮಾತನಾಡುವುದು, ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಮಾಡುವಾಗ ಎಚ್ಚರಿಕೆಯಿಂದ ಮಾಡಿದರೆ ಶಿಕ್ಷೆ ಪ್ರಮಾಣ ಹೆಚ್ಚಾಗಲು ಸಾಧ್ಯ ಎಂದು ಸಿದ್ದರಾಮಯ್ಯ
ಅಭಿಪ್ರಾಯ ಪಟ್ಟರು.
ಸಮಸ್ಯೆಗಳ ಹೊರತಾಗಿಯೂ ನ್ಯಾಯ ಒದಗಿಸಬೇಕು. ಸೈಬರ್ ಅಪರಾಧಗಳು, ಆರ್ಥಿಕ,ಅಪರಾಧಗಳು ಶುರುವಾಗಿದ್ದು ಇದಕ್ಕೆ ತರಬೇತಿ ಅತ್ಯಂತ ಅವಶ್ಯಕ. ಅಭಿಯೋಜಕರು ನಿರಂತರ ಅಧ್ಯಯನ ಮಾಡಬೇಕು ಎಂದು ಮುಖ್ಯ ಮಂತ್ರಿಗಳು ಸಲಹೆ ನೀಡಿದರು.
ಅಭಿಯೋಜಕರ ಅಕಾಡೆಮಿ ಸ್ಥಾಪಿಸಿ ಅನುದಾನವನ್ನೂ ನೀಡಬೇಕೆಂಬ ಬೇಡಿಕೆ ಇದೆ ಶೀಘ್ರ ಈಡೇರಿಸಲು ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ ಪಾಟೀಲ್, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪೊಲೀಸ್ ಮಹಾ ನಿರ್ದೇಶಕರಾದ ಡಾ: ಎಂ. ಎ.ಸಲೀಂ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಾದ ಅಂಜಲಿ ದೇವಿ, ರಾಜ್ಯ ಅಭಿಯೋಜನಾ ಅಧಿಕಾರಿಗಳ ಸಂಘದ ಅಧ್ಯಕ್ಷ ಅಶ್ವಥನಾರಾಯಣ್,ಕಾರ್ಯದರ್ಶಿ ಸವಿತಾ ಮತ್ತಿತರರು ಉಪಸ್ಥಿತರಿದ್ದರು.
