ಬೆಂಗಳೂರು: ಬರಗಾಲದಿಂದ ಬಸವಳಿದು ಬೆಳೆ ನಷ್ಟ ಮಾಡಿಕೊಂಡು ಕೂತಿರುವ ರೈತರು, ಸರ್ಕಾರದಿಂದ ಉತ್ತಮ ಪರಿಹಾರ, ಸಾಂತ್ವನವನ್ನು ಬಯಸುತ್ತಿದ್ದರೆ, ಇತ್ತ ಹೈಕಮಾಂಡ್ ಕೈಗೊಂಬೆ ಸಿಎಂ ಡಿ ಕೆ ಶಿ, ದೆಹಲಿಗೆ ಹೋಗಿ ಬೀದಿಯಲ್ಲಿ ಕುಳಿತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ವ್ಯಂಗ್ಯವಾಡಿದ್ದಾರೆ.
ಕಾವೇರಿ ನೀರು ತಮಿಳುನಾಡಿಗೆ ಹರಿದುಹೋಗುತ್ತಿದೆ,ರೈತರು ಊರು ಬಿಟ್ಟು ವಲಸೆ ಹೋಗುತ್ತಿದ್ದಾರೆ,ಜಾನುವಾರುಗಳನ್ನು ರೈತರು ಸಿಕ್ಕಿದ ಬೆಲೆಗೆ ಮಾರುತ್ತಿದ್ದಾರೆ,ಕುಡಿಯುವ ನೀರಿನ ಹಾಹಾಕಾರವಿದೆ,
ಇಷ್ಟಾದರೂ ಕಾಂಗ್ರೆಸ್ ನಾಯಕರು ರಾಜಕೀಯ ಮಾಡಲು, ಹೈಕಮಾಂಡ್ನ ಋಣ ತೀರಿಸಲು ದೆಹಲಿಗೆ ಓಡಿದ್ದಾರೆ ಎಂದು ಟಗವೀಟ್ ಮಾಡಿ ಪ್ರತಿಪಕ್ಷ ನಾಯಕ ಟೀಕಿಸಿದ್ದಾರೆ.
ಈಗ ನಮಗೆ ಬೇಕಾಗಿರುವುದು ದಿಲ್ಲಿಯಲ್ಲ, ನಮ್ಮ ಹಳ್ಳಿಗಳು. ಹಳ್ಳಿಗಳಿಗೆ ಹೋಗಿ ರೈತರ ಸಂಕಷ್ಟ ಆಲಿಸಿ, ಅವರಿಗೆ ಸಾಂತ್ವನ ನೀಡುವ ಹೆಗಲು ಬೇಕಿದೆ. ಇಂತಹ ಸಮಯದಲ್ಲೂ ಜವಾಬ್ದಾರಿ ಮರೆತು ವೋಟ್ ಚೋರಿ ಎಂದು ಕೂಗುವುದನ್ನು ನೋಡಿದರೆ, ಇದು ರೈತರ ಬೆನ್ನಿಗೆ ಚೂರಿ ಹಾಕಿದ ಸರ್ಕಾರ ಎಂಬುದು ಸಾಬೀತಾಗಿದೆ ಎಂದು ಅಶೋಕ ಹೇಳಿದ್ದಾರೆ.
ಕಾಂಗ್ರೆಸ್ ನಾಯಕರು ಸದ್ಯದಲ್ಲೇ ಅಧಿಕಾರ ಕಳೆದುಕೊಂಡು ಪರ್ಮೆನೆಂಟ್ ಆಗಿ ಬೀದಿಯಲ್ಲೇ ಕೂರುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ.
