ಮೈಸೂರು: ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಅಳಿವಿನಂಚಿನಲ್ಲಿದೆ. ಗುಬ್ಬಚ್ಚಿ ಉಳಿದರೆ ಉತ್ತಮ ಪರಿಸರ ನೋಡಲು ಸಾಧ್ಯ ಎಂದು
ಮೃಗಾಲಯ ಮಾಜಿ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ ತಿಳಿಸಿದರು.
ನಾವು ಗುಬ್ಬಚ್ಚಿಗಳೊಂದಿಗೆ ಬೆಳೆದವರು, ಪರಿಸರ ಸಮತೋಲನ ಬಹಳ ಮುಖ್ಯ, ಗುಬ್ಬಚ್ಚಿ ಮಾತ್ರವಲ್ಲ ಎಲ್ಲ ಪಕ್ಷಿಗಳು ಕೂಡ ಅಳಿವಿನಂಚಿನಲ್ಲಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಗುಬ್ಬಿ ಸಂತತಿ ಉಳಿಸಿ ಎಂದು ಅವರು ಸಲಹೆ ನೀಡಿದರು.
ನಗರದ ಮಹಾರಾಜ ಮೈದಾನದ ಮುಂಭಾಗ ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಹಬ್ಬದಲ್ಲಿ ಪಾಲ್ಗೊಂಡು ಪಕ್ಷಿಗಳಿಗೆ ನೀರಿನ ಬೌಲು ಅಳವಡಿಸಿ ನೀರು ಹಾಗೂ ಆಹಾರ ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಕೃಷಿಗೆ ಕ್ರಿಮಿನಾಶಕಗಳನ್ನು ಬಳಸಲಾಗುತ್ತಿದೆ. ಇದು ವಿಷಕಾರಿ,ಇಲ್ಲಿ ಆಹಾರ ಸೇವಿಸುವ ಗುಬ್ಬಿಗಳು ಸಾವನಪ್ಪುತ್ತಿದೆ.
ಗುಬ್ಬಚ್ಚಿ ಉಳಿಸಿದರೆ ಪರಿಸರದ ಉಳಿವು. ಮನುಷ್ಯರು ನಾವು ಮಾತ್ರ ಬದುಕದೆ, ಎಲ್ಲಾ ಜೀವಿಗಳು ಬದುಕಲು ಅವಕಾಶ ಮಾಡಿಕೊಡಬೇಕೆಂದು ಮಹದೇವಸ್ವಾಮಿ ತಿಳಿಹೇಳಿದರು.
ಸುಮಾರು 25ಕ್ಕೂ ಅಧಿಕ ಗುಬ್ಬಿಗಳ ಪ್ರಬೇಧವಿದೆ,ಆದರೆ ಗುಬ್ಬಿ ಸಂತತಿ ಇಂದು ಅಳಿವಿನಂಚಿನಲ್ಲಿದೆ. ಮನುಷ್ಯನಿಂದ ಗುಬ್ಬಿಗೆ ಕಂಟಕ ಎದುರಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಾಸಿಸಲು ಪೂರಕ ವಾತಾವರಣ ಇಲ್ಲದಿರುವುದು ಗುಬ್ಬಿ ಸಂತತಿ ಇಳಿಮುಖವಾಗಲು ಪ್ರಮುಖ ಕಾರಣ. ಗುಬ್ಬಿಯ ಸಂಕುಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ನಮ್ಮ ಬಾಲ್ಯದಲ್ಲಿ ಗುಬ್ಬಚ್ಚಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು,ಆದರೆ ಇಂದು ಗುಬ್ಬಚ್ಚಿ ಸೇರಿದಂತೆ ಹಲವು ಪಕ್ಷಿ ಸಂಕುಲ ಅವಸಾನದಂಚಿನಲ್ಲಿದೆ ಎಂದು ವಿಷಾದಿಸಿದರು.
ಗುಬ್ಬಚ್ಚಿ ದಿನ ಮಾತ್ರ ಪಕ್ಷಿಗಳಿಗೆ ನೀರು ಆಹಾರ ನೀಡುವುದು ಮುಖ್ಯವಲ್ಲ ಪ್ರತಿದಿನವೂ ಪಕ್ಷಿ ಸಂಕುಲನವನ್ನು ಉಳಿಸಲು ತಮ್ಮ ತಮ್ಮ ಮನೆಯ ಮೇಲೆ ಪ್ರಾಣಿ ಪಕ್ಷಿಗಳಿಗೆ ನೀರಿನ ಬಟ್ಟಲು ಅಳವಡಿಸುವ ಕೆಲಸವಾಗಬೇಕು ಎಂದು ಎಲ್.ಆರ್.ಮಹದೇವಸ್ವಾಮಿ ಹೇಳಿದರು.
ಜನಸಂಖ್ಯೆಗಿಂತ ವಾಹನಸಂದ್ರತೆ ಹೆಚ್ಚಾಗಿರುವುದರಿಂದ ಪರಿಸರ ವಿಕೋಪಕ್ಕೆ ತೆರಳಿ ಸಣ್ಣಪುಟ್ಟ ಪ್ರಾಣಿಪಕ್ಷಿಗಳ ಸಂಕುಲ ನಾಶವಾಗುತ್ತಿದೆ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಹೊಣೆ, ಹವಮಾನ ಮಾಸಗಳ ಬದಲಾವಣೆ ಮುನ್ಸೂಚನೆ ಕೊಡುವುದು ಪ್ರಾಣಿಪಕ್ಷಿಗಳೇ ಮೊದಲು ಹಾಗಾಗಿ ನಾಗರೀಕತೆಯೊಂದಿಗೆ ಉತ್ತಮ ಒಡನಾಟದಲ್ಲೆ ಜೀವಿಸುವ ಪ್ರಾಣಿಪಕ್ಷಿಗಳಿಗೆ ಇಂತಹ ರಣಬಿಸಿಲಿನಲ್ಲಿ ಒಂದಷ್ಟು ನೀರು ಆಹಾರ ನೀಡುವ ಕಾರ್ಯಕ್ಕೆ ಸಾರ್ವಜನಿಕರು ಮುಂದಾಗಬೇಕು ಎಂದು ಅವರು ಕರೆ ನೀಡಿದರು.
ಇದೇ ವೇಳೆ ಪ್ರಕೃತಿ ಸಮತೋಲನಕ್ಕಾಗಿ ಗುಬ್ಬಚ್ಚಿಗಳನ್ನು ಉಳಿಸೋಣ,ಬೇಸಿಗೆಯ ಬಿಸಿಲಿನ ತಾಪದಿಂದ ಪ್ರಾಣಿ ಪಕ್ಷಿಗಳನ್ನು ರಕ್ಷಿಸೋಣ,ಅಳಿದು ಹೋಗುತ್ತಿರುವ ಗುಬ್ಬಚ್ಚಿ ಸಂಕುಲಗಳ ಉಳಿವಿಗಾಗಿ ಜನಜಾಗೃತಿ ಮೂಡಿಸೋಣ,ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂಕುಲವನ್ನು ಸಂರಕ್ಷಿಸೋಣ
ಎಂಬ ಘೋಷವಾಕ್ಯ ನಾಮಫಲಕ ಪ್ರದರ್ಶಿಸುವ ಮೂಲಕ ಪಕ್ಷಿಗಳ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಈ ಕಾರ್ಯಕ್ರಮದಲ್ಲಿ ಮೂಢ ಮಾಜಿ ಸದಸ್ಯರಾದ ಲಕ್ಷ್ಮೀದೇವಿ,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೇಣುಕಾ ರಾಜ್,ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್,ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್,ನಿರೂಪಕ ಅಜಯ್ ಶಾಸ್ತ್ರಿ,ಎಸ್ ಎನ್ ರಾಜೇಶ್, ಬೈರತಿ ಲಿಂಗರಾಜು,ಚಕ್ರಪಾಣಿ ,ಸುಚಿಂದ್ರ ಮತ್ತಿತರರು ಭಾಗವಹಿಸಿದ್ದರು.
