ಮೈಸೂರು: ಸಾವಯವ ಕೃಷಿಕರ ಕುಂಭಮೇಳ ಖ್ಯಾತಿಯ ಕಿಸಾನ್ ಸ್ವರಾಜ್ ಸಮ್ಮೇಳನವು ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತ ಗಂಗೋತ್ರಿ ಆವರಣದಲ್ಲಿ ಆರಂಭಗೊಂಡಿದೆ.
ರಾಗಿ ಶ್ಯಾವಿಗೆ, ಜೋಳದ ರೊಟ್ಟಿ, ಬೆರಕೆ ಸೊಪ್ಪಿನ ಪಲ್ಲ್ಯ,ಬಾಯಲ್ಲಿ ನೀರೂರಿಸುತ್ತಿದೆ.
ಶುಕ್ರವಾರ ದಿಂದ ಆರಂಭವಾಗಿರುವ ಈ ಸಮ್ಮೇಳನವು ಮಾ.1 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಜನಾಕರ್ಷಣೆ ಪಡೆದಿದೆ.
ಕಿಸಾನ್ ಸ್ವರಾಜ್ ಸಮ್ಮೇಳದಲ್ಲಿ ವಿವಿಧ ರಾಜ್ಯಗಳ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ’ (ಅಲಯನ್ಸ್ ಫಾರ್ ಸಸ್ಟೈನೆಬಲ್ ಅಂಡ್ ಹೊಲಿಸ್ಟಿಕ್ ಅಗ್ರಿಕಲ್ಚರ್- ಆಶಾ) ಮತ್ತು ಪ್ರಸಾರಾಂಗ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಜೊತೆಯಾಗಿ ಸಮ್ಮೇಳನವನ್ನು ಆಯೋಜಿಸಿವೆ.
ಜೀವ ವೈವಿಧ್ಯ ಮೇಳಕ್ಕೆ ಅಸ್ಸಾಂ,ಆಂಧ್ರ ಪ್ರದೇಶ, ಕೇರಳ,ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ಬಂದಿರುವ ಐವತ್ತಕ್ಕೂ ಹೆಚ್ಚಿನ ಬೀಜ ಸಂರಕ್ಷಕರು ವಿವಿಧ ಬಗೆಯ ದೇಸಿ ಬೀಜ, ಹಣ್ಣು- ಕಾಯಿ, ತೆನೆಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ. ವೈವಿಧ್ಯಮಯ ಬೀಜಗಳು ಮಾರಾಟಕ್ಕೆ ಸಿಗುತ್ತಿವೆ.
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕೇರಳದ ವಯನಾಡಿನ ಶಾಜಿ 200ಕ್ಕೂ ಹೆಚ್ಚಿನ ಗೆಡ್ಡೆ ಗೆಣಸುಗಳನ್ನು ಪ್ರದರ್ಶಿಸಿದ್ದು ಎಲ್ಲರ ಗಮನ ಸೆಳೆದಿದೆ.
ಹೆಗ್ಗಡದೇವನಕೋಟೆಯ ಅಂತರಸಂತೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ ಪರ್ಪಲ್ ಯಾಮ್, ಬಳ್ಳಿ ಆಲೂಗೆಡ್ಡೆ ಮತ್ತು ಉತ್ತರಿ ಗೆಣಸುಗಳನ್ನು ಮಾರಾಟಕ್ಕೆ ತಂದಿದೆ.ಆಂಧ್ರ ಪ್ರದೇಶದ ಅರಕು ವ್ಯಾಲಿಯ ಸಂಜೀವಿನಿ ಆದಿವಾಸಿ ಸಂಘದವರು ಅಪರೂಪದ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳ 30 ಸಾವಯವ ಮಳಿಗೆಗಳು ಸಮ್ಮೇಳನಕ್ಕೆ ಬಂದಿವೆ.
ರಾಗಿ ಶ್ಯಾವಿಗೆ, ಜೋಳದ ರೊಟ್ಟಿ, ಬೆರಕೆ ಸೊಪ್ಪಿನ ಪಲ್ಲ್ಯ, ಬೇಲ, ಫ್ಯಾಷನ್ ಪ್ರೂಟ್, ಎಳ್ಳಿ ಕಾಯಿ ಜ್ಯೂಸ್ ಗಳನ್ನು ಸವಿಯಬಹುದು.
ದೇಸಿರಿ ನ್ಯಾಚುರಲ್ಸನವರು ಎತ್ತಿನ ಗಾಣ ಹಾಕಿದ್ದಾರೆ. ಹರಳನ್ನು ಬೇಯಿಸುವ ಪ್ರಾತ್ಯಕ್ಷತೆ ನಡೆಯಲಿದೆ. ಗ್ರಾಹಕರು ತಮ್ಮ ಇಷ್ಟದ ಗಾಣದ ಎಣ್ಣೆ ಖರೀದಿಸಬಹುದು.
ಶಾಲಾ ವಿದ್ಯಾರ್ಥಿಗಳು, ನಗರದ ಗ್ರಾಹಕರು ಹಾಗೂ ರೈತರಿಗೆ ಶೈಕ್ಷಣಿಕ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು, ಪರಿಸರ ಸ್ನೇಹಿ ಜೀವನ ಪದ್ಧತಿಯ ಅನುಭವ ಪಡೆಯಬಹುದು.
ಕೃಷಿ ಮತ್ತು ಪರಿಸರ ವಿಷಯಾಧಾರಿತ ಚಲನಚಿತ್ರೋತ್ಸವ ಏರ್ಪಡಿಸಲಾಗಿದೆ.
ಫೆ. 28ರ ಸಂಜೆ 8 ಗಂಟೆಗೆ ಅಭಿನಯಕ್ತಿ ಫೌಂಡೇಶನ್ ಕಲಾವಿದರಿಂದ ವಿಶಿಷ್ಟ ಭರತನಾಟ್ಯ ಪ್ರದರ್ಶನ ನಡೆಯಲಿದೆ.
ಮೈಸೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
