ಮೈಸೂರು: ಕಾವೇರಿ ನೀರು ನಿರ್ವಹಣಾ ಮಂಡಳಿಯು ತಮಿಳುನಾಡಿಗೆ ನೀರು ಬಿಡಲು ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿ, ನೀರನ್ನು ಯಾವುದೇ ಕಾರಣಕ್ಕೂ ಹರಿಸಬಾರದೆಂದು ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರು ಹಾಗೂ ಚಲನಚಿತ್ರ ನಾಯಕನಟರಾದ ಎಸ್ ಜಯಪ್ರಕಾಶ್ ಆಗ್ರಹಿಸಿದ್ದಾರೆ.
ಕಾವೇರಿ ಕ್ರಿಯಾ ಸಮಿತಿ ವತಿಯಿಂದ
ಮೈಸೂರಿನ ಟೌನ್ ಹಾಲ್ ಮುಂಭಾಗ,
ದೊಡ್ಡ ಗಡಿಯಾರದ ವೃತ್ತದ ಬಳಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ಬಾರಿ ಮಾಡಿದ ತಪ್ಪಿಂದಾಗಿ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರ ಈ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ತಿಳಿಸಿದರು.
ಮೈಸೂರಿನ ಟೌನ್ ಹಾಲ್ ಮುಂಭಾಗ ಕಳೆದ ಬಾರಿ ಕಾವೇರಿ ಕ್ರಿಯಾ ಸಮಿತಿಯು ಸತತ 100 ದಿನಗಳ ಕಾಲ ಧರಣಿ ನಡೆಸಿದರೂ ಕೂಡಾ ಸಿದ್ದರಾಮಯ್ಯ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು, ಧರಣಿ ಸ್ಥಳಕ್ಕೆ ಸೌಜನ್ಯಕ್ಕೂ ಭೇಟಿ ಮಾಡಲಿಲ್ಲ,ನಮ್ಮ ರಾಜ್ಯದ ಜೀವನದಿ ಕಾವೇರಿ ನೀರನ್ನು ಸಂರಕ್ಷಣೆ ಮಾಡುವಲ್ಲಿ ವಿಫಲರಾದರು ಎಂದು ಆರೋಪಿಸಿದರು.
ಕಾವೇರಿ ಕ್ರಿಯಾ ಸಮಿತಿಯು ಮೊದಲಿನಿಂದಲೂ ಕಾವೇರಿ ನೀರಿನ ಸಮಸ್ಯೆಗೆ ಹೊಸದಾಗಿ ನ್ಯಾಯಮಂಡಳಿಯನ್ನು ರಚಿಸಿ ವೈಜ್ಞಾನಿಕವಾಗಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಗುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುತ್ತಾ ಬಂದಿದೆ.
ಜಲ ಸಂಪನ್ಮೂಲ ಕೇಂದ್ರ ಸಚಿವ ಎಸ್ ಕೆ ಪಾಟೀಲ್ ಸವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಬಿಜೆಪಿ ಸಂಸದರು ಭೇಟಿ ಮಾಡಿ ಕರ್ನಾಟಕ ರಾಜ್ಯಕ್ಕೆ ಕಾವೇರಿ ನೀರಿನ ವಿಷಯದಲ್ಲಿ ನ್ಯಾಯ ದೊರಕಿಸಿ ಕೊಡುವಂತೆ ಕೋರಿರುವುದನ್ನು ಕ್ರಿಯಾ ಸಮಿತಿಯು ಸ್ವಾಗತಿಸಿದೆ ಎಂದು ಜೆಪಿ ತಿಳಿಸಿದರು.
ಅದೇ ರೀತಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸರ್ವ ಪಕ್ಷದ ಸಭೆ ಕರೆದಿರುವುದು ಮತ್ತು ಸೋಮವಾರದ ವರೆಗೂ ನೀರನ್ನು ಬಿಡದಿರಲು ತೀರ್ಮಾನಿಸಿರುವುದನ್ನು ಕೂಡಾ ಕ್ರಿಯಾ ಸಮಿತಿ ಸ್ವಾಗತಿಸಿದೆ, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಜಯಪ್ರಕಾಶ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಸೋಮೇಗೌಡ, ಶಿವಲಿಂಗಯ್ಯ, ಮಂಜುಳಾ, ಗೋಲ್ಡನ್ ಸುರೇಶ್, ಪ್ರಭುಶಂಕರ, ಹನುಮಂತಯ್ಯ, ರಘು ಆಚಾರ್, ಮಧು, ಮಹೇಶ್, ಕೃಷ್ಣಪ್ಪ , ಹನುಮಂತೇಗೌಡ, ಪ್ರಭಾಕರ್, ಶಿವರಾಂ, ಚಂದ್ರಶೇಖರ್, ತ್ಯಾಗರಾಜ್, ದರ್ಶನ ಗೌಡ, ರವೀಶ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.
