ಚಾಮರಾಜನಗರ: ಕಂದಾಯ ಇಲಾಖೆಯ ಭೂಮಿ ತಂತ್ರಾಂಶದಲ್ಲಿ ಖಾತೆ ವಹಿವಾಟು, ಪೌತಿ ಖಾತೆ, ವಿಭಾಗ ಖಾತೆ ಹಾಗೂ ನೋಂದಾಯಿತ ಪತ್ರಗಳ ಆಧಾರದ ಮೇಲೆ ಖಾತೆ ಬದಲಾವಣೆ ಸೇರಿದಂತೆ ವಿವಿಧ ಖಾತೆ ಬದಲಾವಣೆ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಚಾಮರಾಜನಗರ ಜಿಲ್ಲೆ ಕಳೆದ ಜುಲೈ ತಿಂಗಳಿನಲ್ಲಿ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆ.
ಹೀಗೆ ಪರಿಣಾಮಕಾರಿ ಕಾರ್ಯ ನಿರ್ವಹಿಸುವಲ್ಲಿ ಚಾಮರಾಜನಗರ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳು ರಾಜ್ಯದಲ್ಲಿಯೇ ಉತ್ತಮ ಕಾರ್ಯಕ್ಷಮತೆಯನ್ನು ಸಾಧಿಸುವ ಮೂಲಕ ಜುಲೈ ತಿಂಗಳಿನಲ್ಲಿ ರಾಜ್ಯಮಟ್ಟದಲ್ಲಿ ಚಾಮರಾಜನಗರ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಭೂಮಿ ತಂತ್ರಾಂಶದಲ್ಲಿ ಖಾತೆ ಬದಲಾವಣೆ ಸಂಬಂಧಿತ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಹಾಗೂ ಪಾರದರ್ಶಕ ಸೇವೆ ಒದಗಿಸುವಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಂದಾಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ ಕಾರ್ಯನಿರ್ವಹಿಸಿದ್ದಾರೆ.
ಈ ಸಾಧನೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು, ಶಿರಸ್ತೇದಾರ್ ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಭೂಮಿ ಶಾಖೆಯ ಆಪರೇಟರ್ ಗಳು ಹಾಗೂ ಸಿಬ್ಬಂದಿಗಳ ಪರಿಶ್ರಮ, ಬದ್ಧತೆ ಹಾಗೂ ಸಮಯೋಚಿತ ಕಾರ್ಯನಿರ್ವಹಣೆ ಪ್ರಮುಖ ಪಾತ್ರ ವಹಿಸಿದೆ.
ಚಾಮರಾಜನಗರ ಜಿಲ್ಲೆಯು ರಾಜ್ಯ ಮಟ್ಟದ
ರ್ಯಾಂಕ್ ನಲ್ಲಿ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಂತಸ ವ್ಯಕ್ತಪಡಿಸಿದ್ದು, ಈ ಕಾರ್ಯಕ್ಷಮತೆಯನ್ನು ಸಾಧಿಸಲು ಶ್ರಮಿಸಿದ ತಹಸೀಲ್ದಾರರು, ಶಿರಸ್ತೇದಾರ್, ಕಂದಾಯ ಇಲಾಖೆಯ ಅಧಿಕಾರಿ ಹಾಗೂ ಭೂಮಿ ಶಾಖೆಯ ಆಪರೇಟರ್ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿ, ಪ್ರಶಂಶಿಸಿದ್ದಾರೆ.
ಮುಂದೆಯೂ ಇದೇ ರೀತಿಯ ಕಾರ್ಯಕ್ಷಮತೆಯನ್ನು ಕಾಯ್ದುಕೊಂಡು, ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಸೇವೆಗಳನ್ನು ತ್ವರಿತ, ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ಒದಗಿಸುವಂತೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶ್ರೀರೂಪ ಅವರು ತಿಳಿಸಿದ್ದಾರೆ.
