ಕಲಬುರಗಿ: ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅಸಮಾನತೆ ಹೋಗಿ ಸಮಾನತೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಲಬುರಗಿ ಇವರ ಸಮುಕ್ತಶ್ರಯದಲ್ಲಿ ಕೆಪಿಎಸ್ ಶಾಲಾ ಆವರಣ ಯಡ್ರಾಮಿ ಯಲ್ಲಿ ಆಯೋಜಿಸಲಾಗಿದ್ದ ಪ್ರಜಾಸೌಧ, ಕೆಪಿಎಸ್ ಶಾಲೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ನೂತನವಾಗಿ ಘೋಷಣೆಯಾಗಿರುವ ಯಡ್ರಾಮಿ ತಾಲ್ಲೂಕಿನಲ್ಲಿ, ಜೇವರ್ಗಿ ಮತಕ್ಷೇತ್ರದಲ್ಲಿ 87 ಕಾಮಗಾರಿಗಳ ಕಾಮಗಾರಿಗಳನ್ನು 867.49 ಕೋಟಿ ವೆಚ್ಚದ , 38.29 ಕೋಟಿ ವೆಚ್ಚ ಕಾಮಗಾರಿಗಳಿಗೆ ಉದ್ಘಾಟನೆ ಮಾಡಲಾಗಿದೆ. ಒಟ್ಟಾರೆ 906 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ವಿರೋಧಪಕ್ಷದವರು ರಾಜಕಾರಣಕ್ಕಾಗಿ ಸುಳ್ಳನ್ನೇ ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಮೂಲಸೌಕರ್ಯ ಕಾಮಗಾರಿಗಳಿಗೆ ಸರ್ಕಾರದಲ್ಲಿ ಅನುದಾನವಿಲ್ಲ ಎಂದು ಎಲ್ಲೆಡೆ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದ್ದರೆ ಜೇವರ್ಗಿ ಮತಕ್ಷೇತ್ರ ಒಂದರಲ್ಲಿ 906 ಕೋಟಿ ಗಳನ್ನು ವೆಚ್ಚ ಮಾಡಲಾಗುತ್ತಿರಲಿಲ್ಲ ಎಂದು ಹೇಳಿದರು.
1 ಲಕ್ಷದ 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ವೆಚ್ಚ ಮಾಡಲಾಗಿದೆ.ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಯಂತೆ ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ನುಡಿದಂತೆ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ವತಿಯಿಂದ 592 ಭರವಸೆಗಳನ್ನು ನೀಡಲಾಗಿತ್ತು. 243 ಭರವಸೆಗಳನ್ನು ಈಡೇರಿಸಲಾಗಿದೆ. ಉಳಿದ ಅವಧಿಯಲ್ಲಿ ಮಿಕ್ಕ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಬಿಜೆಪಿ 2018 ರಿಂದ ಅಧಿಕಾರದಲ್ಲಿದ್ದು, ಅವರು ನೀಡಿದ್ದ 600 ಭರವಸೆಗಳಲ್ಲಿ 10% ಭರವಸೆಗಳನ್ನು ಈಡೇರಿಸಲಾಗಲಿಲ್ಲ ಎಂದು ಸಿಎಂ ಟೀಕಿಸಿದರು.
300 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು ಹಾಕಲಾಗಿದೆ,
ಶಾಸಕ ಅಜಯ್ ಸಿಂಗ್ ಅವರು ಅನುದಾನವನ್ನು ಪೂರ್ಣವಾಗಿ ವೆಚ್ಚ ಮಾಡಬೇಕು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಅಜಯ್ ಸಿಂಗ್ ಅವರಿಗೆ ತಿಳಿಸಲಾಗಿತ್ತು. ಅದರಂತೆ 300 ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಅಡಿಗಲ್ಲು ಹಾಕಲಾಗಿದೆ. ರಾಜ್ಯದಲ್ಲಿ ಒಟ್ಟು 900 ರಾಜ್ಯಕ್ಕೆ ಕೆಪಿಎಸ್ ಮಂಜೂರಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಎ ಐ ಸಿ ಸಿ ಅಧ್ಯಕ್ಷರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಚನ್ನಬಸಪ್ಪ ದರ್ಶನಾಪುರ, ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ರಹೀಂ ಖಾನ್ ಹಾಗೂ ಶಾಸಕರು ಉಪಸ್ಥಿತರಿದ್ದರು.
