ಮಳವಳ್ಳಿ: ತಾಲ್ಲೂಕಿನಲ್ಲಿ ಕುಸಿದಿರುವ ಆಡಳಿತ, ಭ್ರಷ್ಟಾಚಾರ ಮತ್ತು ರೈತರ ಸಮಸ್ಯೆಗಳನ್ನು ಮುಂದಿಟ್ಟು ಜೆಡಿಎಸ್ ಪ್ರತಿಭಟನೆ ಕೈಗೆತ್ತಿಕೊಂಡಿದೆಯೇ ಹೊರತು, ಪಕ್ಷದ ಅಸ್ಥಿತ್ವ ತೋರಿಸಲು ಅಲ್ಲ ಎಂದು ಜೆಡಿಎಸ್ ಮುಖಂಡರು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹನುಮಂತು, ತಾಲ್ಲೂಕಿನಲ್ಲಿ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದರು.
ಪೊಲೀಸ್ ಠಾಣೆಯಲ್ಲೇ ಲಂಚ ಸ್ವೀಕರಿಸುವಾಗ ಎಎಸ್ಐ, ತಾಲ್ಲೂಕು ಕಚೇರಿಯಲ್ಲಿ ರೈತರಿಂದ ಲಂಚ ಪಡೆಯುವಾಗ ಆರ್ಐ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಟಿಎಪಿಸಿಎಂಎಸ್ನಿಂದ ತಳಗವಾದಿಗೆ ಸರಬರಾಜಾಗಿದ್ದ 70 ಲಕ್ಷ ರೂ. ಮೌಲ್ಯದ ರಸಗೊಬ್ಬರ ನಾಪತ್ತೆಯಾಗಿರುವುದು ಭ್ರಷ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದರು.
ಈ ಪ್ರಕರಣದ ವಿಚಾರಣೆಗೆ ಹೋದ ನಿರ್ದೇಶಕ ಶ್ರೀಧರ್ ಪರಿಶೀಲನೆಗಾಗಿ ಬಿಲ್ ಬುಕ್ ತಂದ ಕಾರಣಕ್ಕೆ ಅವರ ಮೇಲೆ ಕೇಸ್ ಹಾಕಿರುವುದು ರಾಜಕೀಯ ದಬ್ಬಾಳಿಕೆ ಅಲ್ಲವೇ ಎಂದು ಅವರು ಕಿಡಿಕಾರಿದರು. ಈ ರೀತಿ ಕೇಸ್ ಹಾಕುವುದರಿಂದ ಜೆಡಿಎಸ್ ಮುಖಂಡರನ್ನು ಬೆದರಿಸಿ ಬಾಯಿಮುಚ್ಚಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಶಾಸಕರಾಗಿದ್ದ ವೇಳೆ ಅನ್ನದಾನಿ ಅವರು 2 ಲಕ್ಷ ರೂ. ಲಂಚ ಪಡೆಯುತ್ತಿರುವ ಆರೋಪವು ಮಾಧ್ಯಮವೊಂದರ ಜೊತೆ ಸೇರಿ ಕಾಂಗ್ರೆಸ್ ನಾಯಕರೇ ಹೆಣೆದ ಚಿತ್ರಣ ಎಂದು ಹನುಮಂತು ಸ್ಪಷ್ಟನೆ ನೀಡಿದರು
ಜನಪರ ಹೋರಾಟದ ಮೂಲಕ ಬೆಳೆದು ದೇಶಕ್ಕೆ ಪ್ರಧಾನಿ, ಹಲವು ಮುಖ್ಯಮಂತ್ರಿಗಳನ್ನು ನೀಡಿರುವ ಜೆಡಿಎಸ್ಗೆ ಅಸ್ಥಿತ್ವ ತೋರಿಸಿಕೊಳ್ಳಲು ದೆಹಲಿಯಲ್ಲಿ ನಿಮ್ಮ ಶಾಸಕರಂತೆ ಅಸ್ತಿತ್ವದ ಅಲೆದಾಟದ ಹೋರಾಟ ಮಾಡುವ ಅಗತ್ಯವಿಲ್ಲ ಕುಟುಕಿದರು.
ತಾಲ್ಲೂಕಿನ ಅಭಿವೃದ್ಧಿ ವಿಚಾರಕ್ಕೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ದಿನಾಂಕ ಮತ್ತು ಸಮಯವನ್ನು ಕಾಂಗ್ರೆಸ್ ನಾಯಕರೇ ನಿಗದಿಪಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ನಿಧನದಿಂದ ತಾಲ್ಲೂಕಿನ ಆಡಳಿತ ಅವ್ಯವಸ್ಥೆ ವಿರುದ್ಧ ಹಮ್ಮಿಕೊಂಡಿದ್ದ ಹೋರಾಟವನ್ನು ಮುಂದೂಡಲಾಗಿದೆ, ಮುಂದೆ ದಿನಾಂಕ ಗೊತ್ತುಪಡಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭಾ ಮಾಜಿ ಸದಸ್ಯ ವಡ್ಡರಹಳ್ಳಿ ಸಿದ್ದರಾಜು,ಪರಿಶಿಷ್ಟ ಜಾತಿ /ಪರಿಶಿಷ್ಟಪಂಗಡ ಘಟಕದ ತಾ.ಅಧ್ಯಕ್ಷ ಕಾಂತರಾಜು, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಧರ್, ಪ್ರಭು, ಸಿದ್ದಾಚಾರಿ, ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
