ಬೆಂಗಳೂರು: ಜಾನಪದ ನಮ್ಮ ನಾಡಿನ ಆತ್ಮ,ನಮ್ಮ ಹಿರಿಯರು ಸಂಗ್ರಹಿಸಿ, ಉಳಿಸಿ, ಬೆಳೆಸಿದ ಈ ಅಮೂಲ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕನ್ನಡ ಜಾನಪದ ಪರಿಷತ್ ಹಾಗೂ ಜಾನಪದ ಯುವ ಬ್ರಿಗೇಡ್
ರಾಜ್ಯಾಧ್ಯಕ್ಷರಾದ ಡಾ ಜಾನಪದ ಎಸ್. ಬಾಲಾಜಿ ತಿಳಿಸಿದ್ದಾರೆ.
ವಿಶ್ವ ಜಾನಪದ ದಿನಾಚರಣೆ ಹಿನ್ನೆಲೆಯಲ್ಲಿ ಜನಪದ ಕಲಾವಿದರಾದ ಹಂಸಾಳೆ ಮಂಜು ಅವರ ತಂಡಕ್ಕೆ ಗೌರವ ಸಲ್ಲಿಸಿ ಡಾ ಜಾನಪದ ಎಸ್. ಬಾಲಾಜಿ ಅವರು ಜಾನಪದ ಕಲೆಯ ಬಗ್ಗೆ ಲೇಖನ ಬರೆದು ಮಾಹಿತಿ ಹಂಚಿಕೊಂಡಿದ್ದಾರೆ.
ನಮ್ಮ ಸಿರಿಗಂಧದ ಕನ್ನಡ ನಾಡಿನಲ್ಲಿ ಜಾನಪದದ ಅಧ್ಯಯನ ಮತ್ತು ಸಂಶೋಧನೆಗೆ ತನ್ನದೇ ಆದ ಮಹತ್ವವಿದೆ. ೧೯೬೭ನೇ ಇಸವಿಯಲ್ಲಿ ಡಾ. ಹಾಮನಾಯಕ್ ಅವರು ಮೈಸೂರಿನಲ್ಲಿ “ಜಾನಪದ ಸ್ವರೂಪ” ಎಂಬ ಪ್ರಬಂಧವನ್ನು ಮಂಡಿಸುವ ಮೂಲಕ ಜಾನಪದದ ಕುರಿತು ವಿಚಾರ ಸಂಕೀರ್ಣದ ಚರ್ಚೆಗೆ ಮಹತ್ವದ ಹೆಜ್ಜೆ ಇಟ್ಟರು.
ಕರ್ನಾಟಕದಲ್ಲಿ ಜಾನಪದ ಸಂಗ್ರಹ ಮತ್ತು ಸಂಶೋಧನಾ ಕಾರ್ಯವನ್ನು ಆರಂಭಿಸಿದವರಲ್ಲಿ ಅಳಸಂಗಿ ಗೆಳೆಯರು, ಜಿ. ಶಂ. ಪರಮಶಿವಯ್ಯ, ಎಚ್. ಎಲ್. ನಾಗೇಗೌಡ, ಎಂ. ಎಂ. ಲಟ್ಟಿ, ಗದ್ದಿಗೆಮಠ, ಬಿರಾದಾರ್, ಸಿಂಪಿಲಿಂಗಣ್ಣ, ಕೆ. ಆರ್. ಲಿಂಗಪ್ಪ, ಗೋರು ಚನ್ನಬಸಪ್ಪ, ಸೋಮಶೇಖರ್, ಇಮ್ರಾಪುರ, ಮುದೇನೂರು ಸಂಗಣ್ಣ ಮುಂತಾದವರು ಪ್ರಮುಖರು. ಇವರು ಕರ್ನಾಟಕದ ವಿವಿಧ ಭಾಗಗಳಿಗೆ ತೆರಳಿ ಅಲ್ಲಿನ ಜನಪದ ಬದುಕು, ಆಚರಣೆ, ಸಂಪ್ರದಾಯ, ಹಾಡು, ಕುಣಿತ ಹಾಗೂ ಪ್ರದರ್ಶನ ಕಲೆಗಳನ್ನು ಸಂಗ್ರಹಿಸಿ ದಾಖಲಿಸುವ ಮಹತ್ವದ ಕಾರ್ಯವನ್ನು ಮಾಡಿದರು.
ಅವರು ಅನೇಕ ಜಾನಪದ ಕಲಾವಿದರನ್ನು ಭೇಟಿ ಮಾಡಿ, ಅವರ ಕಲೆಗಳನ್ನು ಗುರುತಿಸಿ ಸಂಗ್ರಹಿಸಿದರು ಎಂದು ಸ್ಮರಿಸಿದರು.
ಕಂಸಾಳೆ ಮಹದೇವಯ್ಯ, ಹೆಬ್ಬಣಿ ಮಾದಯ್ಯ, ಗೊರವರ ಪುಟ್ಮಲ್ಲೇಗೌಡ, ಕೊಡಗಿನ ಮಾದ, ಪಕೀರವ, ಗುಡಿಸಾಗರ ಗೌರವ ಮಾದರ್, ಗಜಲ್ ಗುಂಡಮ್ಮ, ಗೊರವರ ಕೆಂಚಮಲ್ಲಯ್ಯ, ಕೋಲಾಟದ ಮಲ್ಲಯ್ಯ, ಕರಗದ ಕೆಂಪಣ್ಣ, ಅಂಟಿಕೆ ಪಟ್ಟಿಗೆ ಸೋಬಾನೆ ಕೃಷ್ಣೇಗೌಡ ಮುಂತಾದ ಅನೇಕ ಕಲಾವಿದರ ಕಲಾ ಪರಂಪರೆಗಳನ್ನು ದಾಖಲಿಸುವ ಮೂಲಕ ಕರ್ನಾಟಕದ ಜಾನಪದ ಸಂಪತ್ತನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಿತು.
ಇಂದಿನ ಯುವಪೀಳಿಗೆಗೆ ಜಾನಪದ ಯಾರಿಂದ ಬಂತು, ಯಾರು ಮೊದಲು ಜಾನಪದವನ್ನು ಸಂಗ್ರಹಿಸಿದರು, ಯಾವ ಧ್ವನಿಯಲ್ಲಿ, ಯಾವ ಬನಿಯಲ್ಲಿ ಹಾಡುಗಳನ್ನು ಹಾಡಲಾಗುತ್ತಿತ್ತು ಯಾವ ರೀತಿಯ ಕುಣಿತಗಳು ಮತ್ತು ಪ್ರದರ್ಶನ ಕಲೆಗಳು ನಮ್ಮ ನೆಲದಲ್ಲಿ ಬೆಳೆದು ಬಂದವು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಯ ಮೇಲಿದೆ. ಅದು ಯುವಜನರ ಕೈಯಲ್ಲಿದೆ, ಬಾಯಲ್ಲಿದೆ, ದನಿಯಲ್ಲಿದೆ; ನಮ್ಮ ಮಹಿಳೆಯರ ಕುಣಿತದಲ್ಲಿದೆ, ಹಾಡಿನಲ್ಲಿದೆ, ಕಲಾ ಪ್ರದರ್ಶನದಲ್ಲಿದೆ ಎಂದು ವಿವರಿಸಿದರು.
ನಮ್ಮ ನೆಲದ ಸಂಸ್ಕೃತಿ, ನಮ್ಮ ಜನರ ಬದುಕು ಮತ್ತು ನಮ್ಮ ಹಿರಿಯರು ಉಳಿಸಿಕೊಂಡು ಬಂದಿರುವ ಪರಂಪರೆಯನ್ನು ನಾವು ಆಸಕ್ತಿಯಿಂದ ರೂಢಿಸಿಕೊಳ್ಳಬೇಕು. ಜಾನಪದವನ್ನು ಕೇವಲ ಹಿಂದಿನ ಕಾಲದ ನೆನಪಾಗಿ ನೋಡದೆ, ಇಂದಿನ ಬದುಕಿನ ಜೀವಂತ ಸಂಸ್ಕೃತಿಯಾಗಿ ಬೆಳೆಸಬೇಕು.
ಆದ್ದರಿಂದ ಜಾನಪದವನ್ನು ಇನ್ನಷ್ಟು ವಿಸ್ತರಿಸೋಣ. ಎಲ್ಲಾ ಕಾಲೇಜುಗಳಲ್ಲಿಯೂ ಜಾನಪದದ ಕುರಿತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡೋಣ. ಜಾನಪದ ಕಲೆಗಳ ಕಲಿಕೆ ಮತ್ತು ತರಬೇತಿಗೆ ಅವಕಾಶ ಕಲ್ಪಿಸೋಣ. ವಿಶ್ವವಿದ್ಯಾಲಯಗಳಲ್ಲಿ ಜಾನಪದ ಅಧ್ಯಯನ, ಸಂಶೋಧನೆ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸೋಣ,ಜಾನಪದವನ್ನು ಉಳಿಸೋಣ, ಬೆಳೆಸೋಣ , ವಿಸ್ತರಿಸೋಣ ಎಂದು ಡಾ ಜಾನಪದ ಎಸ್. ಬಾಲಾಜಿ ಮನವಿ ಮಾಡಿದರು.
