ಇರಾನ್: ಅಮೇರಿಕಾ,ಇಸ್ರೇಲ್ ಇರಾನ್ ಕದನ ಮುಂದುವರಿದಿದ್ದು, ಇಸ್ರೇಲ್ ಮೇಲೆ ಇರಾನ್ ದಾಳಿಯನ್ನು ತೀವ್ರಗೊಳಿಸಿದೆ.
ಒಂದು ವೇಳೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದುಕಿದ್ದರೆ ಹುಡುಕಿ ಕೊಲ್ಲುತ್ತೇವೆ ಎಂದು ಇರಾನ್ ಭಾನುವಾರ ಕಠೋರವಾಗಿ ಹೇಳಿದೆ.
ಮಕ್ಕಳನ್ನು ಕೊಲ್ಲುವ ಆತ ಜೀವಂತವಾಗಿದ್ದರೆ, ನಾವು ಆತನನ್ನು ಪೂರ್ಣ ಬಲದಿಂದ ಬೆನ್ನಟ್ಟಿ ಹುಡುಕುತ್ತೇವೆ ಮತ್ತು ಕೊಂದೇ ತೀರುತ್ತೇವೆ ಎಂದು ಇರಾನ್ನ ಕ್ರಾಂತಿಕಾರಿ ಪಡೆಗಳು ತಿಳಿಸಿವೆ.
ಸಾಮಾಜಿಕ ಮಾಧ್ಯಮದಲ್ಲಿ ಸದ್ಯ ಬೆಂಜಮಿನ್ ನೆತನ್ಯಾಹು ಎಲ್ಲಿದ್ದಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಆಗುತ್ತಿರುವ ಬೆನ್ನಲ್ಲೇ ಇರಾನ್ ಈ ಪ್ರತಿಕ್ರಿಯೆ ನೀಡಿದೆ. ನೆತನ್ಯಾಹು ಅವರು ಕೆಲವು ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿ ಕೊಂಡಿಲ್ಲದಿರುವುದು ಚರ್ಚೆ ಹುಟ್ಟು ಹಾಕಿದೆ.
ಮಾರ್ಚ್ 12ರ ಅವರ ವಿಡಿಯೋದ ಬಗ್ಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಬೆಂಜಮಿನ್ ಅವರ ಒಂದು ಕೈಯಲ್ಲಿ ಆರು ಬೆರಳುಗಳು ಕಂಡುಬಂದಿದ್ದು, ಇದು ಎಐ ಬಳಸಿಕೊಂಡು ರಚಿಸಿರುವ ವಿಡಿಯೋ ಆಗಿರಬಹುದು ಎಂಬ ಅನುಮಾನ ಹುಟ್ಟುಹಾಕಿದೆ.
ಫೆಬ್ರುವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲಿ ವೈಮಾನಿಕ ದಾಳಿಗಳು ಪ್ರಾರಂಭವಾದ ನಂತರ, 76 ವರ್ಷದ ನೆತನ್ಯಾಹು ಅವರು ವಿಡಿಯೋದಲ್ಲಿ ತಮ್ಮ ಮೊದಲ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಅವರ ಸಾವಿನ ವರದಿಗಳನ್ನು ನಿರಾಕರಿಸಿದ್ದು, ಅವರು ಆರೋಗ್ಯವಾಗಿದ್ದಾರೆಎಂದು ಹೇಳಿದೆ.
