ಕುವೈತ್: ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ.
ಈ ಘಟನೆಯಿಂದಾಗಿ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಕುವೈತ್ ವಿಮಾನ ನಿಲ್ದಾಣದ ಆವರಣದ ಮೇಲೆ ಏಕಕಾಲದಲ್ಲಿ ಹಲವು ಡ್ರೋನ್ಗಳು ಅಪ್ಪಳಿಸಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಇರಾನ್ ಸೇನೆಯು ಕುವೈತ್ ವಿಮಾನ ನಿಲ್ದಾಣದ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡಿದೆ.
ಡ್ರೋನ್ಗಳು ಅಪ್ಪಳಿಸುತ್ತಿದ್ದಂತೆ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ಬೆಂಬಲಿತ ಗಲ್ಫ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಹಾಗೂ ಸೇನಾ ಸಂಘರ್ಷ ತೀವ್ರಗೊಂಡಿದೆ. ಅಮೆರಿಕದ ಮಿಲಿಟರಿ ಬೇಸ್ಗಳು ಅಥವಾ ಪಾಶ್ಚಿಮಾತ್ಯ ದೇಶಗಳಿಗೆ ಸಹಕರಿಸುತ್ತಿರುವ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಇರಾನ್ ಈ ದಾಳಿ ನಡೆಸಿದೆ ಎಂದು ರಕ್ಷಣಾ ವಲಯದ ತಜ್ಞರು ವಿಶ್ಲೇಷಿಸಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲರ್ಟ್ ಆಗಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೃತಪಟ್ಟ ಭಾರತೀಯ ಪ್ರಜೆಯ ಮೃತದೇಹವನ್ನು ಶೀಘ್ರವಾಗಿ ಭಾರತಕ್ಕೆ ತರಲು ರಾಯಭಾರ ಕಚೇರಿ ಅಧಿಕಾರಿಗಳು ಕುವೈತ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
