ಬೆಂಗಳೂರು: ಭಾರತವನ್ನು ಒಂದು ಭವ್ಯ ದೇಗುಲಕ್ಕೆ ಹೋಲಿಸಿದರೆ ರಾಜ್ಯಗಳು ಅದರ ಭದ್ರ ಬುನಾದಿಯ ಕಂಬಗಳಿದ್ದಂತೆ ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
80ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ನಾಡಿನ ಜನತೆಯನ್ನುದ್ದೇಶಿಸಿ ಸಿಎಂ ಮಾತನಾಡಿದರು.
ನಾಡಿನ 7.5 ಕೋಟಿ ಕನ್ನಡಿಗರು ಹಾಗೂ ಸಮಸ್ತ ಭಾರತೀಯರಿಗೆ 80ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಸಿಎಂ ಹೇಳಿದರು.
ಒಕ್ಕೂಟ ತತ್ವವನ್ನು ಮತ್ತಷ್ಟು ಗಟ್ಟಿಗೊಳಿಸೋಣ. ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ವೀರ ಸೈನಿಕರ ತ್ಯಾಗವನ್ನು ಸ್ಮರಿಸುತ್ತಾ, ಕಾಯಕ, ಸಮಾನತೆ ಮತ್ತು ದಾಸೋಹ ತತ್ವಗಳಡಿ ಸರ್ವರನ್ನೂ ಒಳಗೊಂಡ ಆಡಳಿತ ನೀಡುವ ಸಂಕಲ್ಪ ನಮ್ಮ ಸರ್ಕಾರದ್ದು ಎಂದು ತಿಳಿಸಿದರು.
ಪಂಡಿತ್ ಜವಾಹರಲಾಲ್ ನೆಹರೂ ಅವರ ‘ನವ ಭಾರತ’ ಕಲ್ಪನೆಯಂತೆ “ಯುವ ಕರ್ನಾಟಕ – ನವ ಭಾರತ” ಧ್ಯೇಯದೊಂದಿಗೆ, 2047ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು 320 ಲಕ್ಷ ಕೋಟಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಆಡಳಿತವನ್ನು ಜನರ ಮನೆಬಾಗಿಲಿಗೆ ತರಲು ‘ಪ್ರಜಾಸೇವೆ ಇಲಾಖೆ’ ಸ್ಥಾಪಿಸಿ, ಸಚಿವರು ಮತ್ತು ಶಾಸಕರಿಂದ ನಿರಂತರ ಪ್ರಜಾಸಂಪರ್ಕ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಸಾಮಾಜಿಕ ಭದ್ರತೆ ನೀಡುತ್ತಿರುವ ಪಂಚ ಗ್ಯಾರಂಟಿಗಳ ಜೊತೆಗೆ, ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು 6ನೇ ಗ್ಯಾರಂಟಿಯಾಗಿ ‘ಭೂ-ಗ್ಯಾರಂಟಿ’ ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ 77,000 ಕೋಟಿಗೂ ಅಧಿಕ ಮೊತ್ತ ನೇರ ವರ್ಗಾವಣೆಯಾಗಿದೆ ಎಂದು ಯೋಜನೆ ವಿವರಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು 72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಖಾಸಗಿ ಉದ್ಯೋಗಕ್ಕಾಗಿ ಯುವ ಉದ್ಯೋಗ ಸೇತು ಹಾಗೂ ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗಗಳಿಗೆ ಮಾಸಿಕ 2,500 ಪ್ರೋತ್ಸಾಹಧನ ನೀಡುವ “ಉದ್ಯೋಗ ನಿಧಿ” ಘೋಷಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 6ನೇ ತರಗತಿಯಿಂದಲೇ ಎಐ ಶಿಕ್ಷಣ, ಬೆಂಗಳೂರಿನಲ್ಲಿ ದೇಶದ ಮೊದಲ ಸರ್ಕಾರಿ ಎಐ ವಿಶ್ವವಿದ್ಯಾಲಯ, ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ವೃತ್ತಿಪರ ಕೋರ್ಸ್ಗಳಲ್ಲಿ ಶೇ.7.5 ವಿಶೇಷ ಮೀಸಲಾತಿ ಹಾಗೂ 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೈತರಿಗಾಗಿ ಡ್ರೋನ್ ಆಧಾರಿತ ಬೆಳೆ ಸಮೀಕ್ಷೆಯ “ಮುಖ್ಯಮಂತ್ರಿ ರೈತ ಚೈತನ್ಯ” ಮತ್ತು ಸಣ್ಣ ರೈತರಿಗೆ ಯಂತ್ರೋಪಕರಣಗಳ ಬಾಡಿಗೆ ಮೇಲೆ 50% ಸಬ್ಸಿಡಿ ನೀಡುವ “ರೈತ ಮಿತ್ರ” ಯೋಜನೆ ಜಾರಿಗೊಳಿಸಲಾಗುವುದು. ಎತ್ತಿನಹೊಳೆ ಯೋಜನೆಯ ಮೊದಲ ಹಂತ ಹಾಗೂ ₹16,000 ಕೋಟಿ ಮೊತ್ತದ ಜಲಸಂಪನ್ಮೂಲ ಯೋಜನೆಗಳು ಚಾಲನೆಯಲ್ಲಿವೆ. ಎಸ್ಸಿ/ಎಸ್ಟಿ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕೆ ಬೃಹತ್ ಅನುದಾನ ಮೀಸಲಿಡಲಾಗಿದೆ ಎಂದು ಡಿ.ಕೆ.ಶಿ ತಿಳಿಸಿದರು.
ಬೆಂಗಳೂರಿಗೆ ₹1.50 ಲಕ್ಷ ಕೋಟಿ ಮೂಲಸೌಕರ್ಯ, ₹26,000 ಕೋಟಿ ವೆಚ್ಚದ 117 ಕಿ.ಮೀ ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್’, 5 ಹೊಸ ಪೊಲೀಸ್ ಕಮಿಷನರೇಟ್ಗಳು, ಆ್ಯಂಟಿ ರೌಡಿ ಸ್ಕ್ವಾಡ್, ಲಾಲ್ಬಾಗ್ ಮಾದರಿಯ 5 ಬೃಹತ್ ಟ್ರೀ ಪಾರ್ಕ್ಗಳು ಹಾಗೂ 7 ಕೆರೆಗಳ ಪುನಃಶ್ಚೇತನ ಕೈಗೆತ್ತಿಕೊಳ್ಳಲಾಗಿದೆ.
ಕನ್ನಡಕೋಟಿಯ ಕೈಗಳು ನನ್ನ ಜೊತೆ ಕೈ ಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
