ಬೆಳಗಾವಿ: ಮಹಿಳಾ ಅಧಿಕಾರಿಯೊಬ್ಬರ ತೇಜೋವಧೆ ಮಾಡಲು ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಅಧಿಕಾರಿಯೊಬ್ಬರು ಜೈಲು ಪಾಲಾಗಿದ್ದಾರೆ.
ಮಹಿಳಾ ಅಧಿಕಾರಿ ಮನೆಯ ಬಲ್ಬ್ ಹೋಲ್ಡರ್ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ ಸಂಚನ್ನು ಪೊಲೀಸರು ತನಿಖೆಯಿಂದ ಬಯಲಿಗೆಳೆದಿದ್ದಾರೆ.
ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದಲ್ಲಿ ವಿನೋದ್. ಟಿ ಎಂಬ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ.
ಆರೋಪಿಯ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಹಿಳಾ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಮನೆ ಬಲ್ಬ್ ಹೋಲ್ಡರ್ಗಳಲ್ಲಿ ಒಟ್ಟು 8 ರಹಸ್ಯ ಕ್ಯಾಮರಾಗಳನ್ನು ಅಳವಡಿಸಲಾಗಿತ್ತೆಂದು ತಿಳಿದು ಬಂದಿದೆ.
ಮಹಿಳಾ ಅಧಿಕಾರಿ ವಿನೋದ್ನ ವರ್ಗಾವಣೆಗೆ ಕಾರಣರಾಗಿದ್ದ ಹಿನ್ನೆಲೆಯಲ್ಲಿ, ಸೇಡು ತೀರಿಸಿಕೊಳ್ಳಲು ಆತ ಅಡ್ಡಮಾರ್ಗ ಹಿಡಿದಿದ್ದ ಎಂದು ತನಿಖೆ ವೇಳೆ ಗೊತ್ತಾಗಿದೆ.
ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಇದೀಗ ಮಹಿಳಾ ಅಧಿಕಾರಿಯ ಕಚೇರಿಯಲ್ಲಿದ್ದ ಮತ್ತೊಬ್ಬ ಅಧಿಕಾರಿಯನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ವಿನೋದ್ ಟಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜೈಲಿಗೆ ಕಳಿಸಲಾಗಿದೆ.
