ಮೈಸೂರು: ಶಿಕ್ಷಕರ ಒಗ್ಗಟ್ಟು ಮತ್ತು ಸಕಾರಾತ್ಮಕ ಚಿಂತನೆಯಿಂದ ನಗರದ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಿಗೂ ಮೀರಿ ಮುಂದುವರಿದು ಮಾದರಿಯಾಗಿದೆ.
ಹೆಬ್ಬಾಳು (ಕುಂಬಾರಕೊಪ್ಪಲು) ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿ ಬೆಳೆಯುತ್ತಿದೆ.
1960 ರಲ್ಲಿ 35 ಗುಂಟೆ ಜಾಗದಲ್ಲಿ ಆರಂಭವಾದ ಈ ಶಾಲೆಗೆ 66 ವರ್ಷಗಳು ಕಳೆದಿದ್ದರೂ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಈ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಇಂದು ಇಂಜಿನಿಯರ್, ವೈದ್ಯ, ಉದ್ಯಮಿ, ರಾಜಕಾರಣಿ, ಸಮಾಜ ಸೇವಕರಾಗಿ ಬೆಳೆದಿದ್ದಾರೆ.
ಮನೆ ಮನೆ ಮಾದೇಗೌಡ ಎಂದೇ ಖ್ಯಾತರಾದ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಸೇರಿದಂತೆ ಹಲವು ಗಣ್ಯರು ಇದೇ ಶಾಲೆಯ ವಿದ್ಯಾರ್ಥಿಗಳು.
ಕುಂಬಾರಕೊಪ್ಪಲು ಸುತ್ತಮುತ್ತ ಹಲವು ಖಾಸಗಿ ಶಾಲೆಗಳು ತಲೆ ಎತ್ತಿದ್ದರೂ, ಈ ಶಾಲೆಯಲ್ಲಿ ದಾಖಲಾತಿ ಕುಸಿದಿಲ್ಲ. ಹೆಬ್ಬಾಳು, ಬಿ.ಎಂ. ಶ್ರೀನಗರ, ಮೇಟಗಳ್ಳಿ, ಶ್ಯಾದನಹಳ್ಳಿ, ಮಂಜೇಗೌಡನಕೊಪ್ಪಲು ಸೇರಿದಂತೆ ಸುತ್ತಮುತ್ತಲ ಬಡಾವಣೆಯ ಪೋಷಕರು ತಮ್ಮ ಮಕ್ಕಳನ್ನು ಆಟೋ ಮೂಲಕ ಈ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಲೆಯಿಂದ ಹೊರಗುಳಿಯುವ ಮಕ್ಕಳ ಮನೆಗೆ ಖುದ್ದು ಶಿಕ್ಷಕರೇ ಭೇಟಿ ನೀಡಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುತ್ತಿರುವುದು ವಿಶೇಷ.
ಹೆಬ್ಬಾಳು, ಮೇಟಗಳ್ಳಿ, ಬೆಳಗೊಳ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸಕ್ಕೆ ಬರುವ ಕಾರ್ಮಿಕರ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿರುವುದು ವಿಶೇಷ. ಹಾಸನ, ಚಾಮರಾಜನಗರ, ಬೆಳಗಾವಿ, ಗದಗ, ಹಾವೇರಿ, ಮಂಡ್ಯ ಜಿಲ್ಲೆಗಳಲ್ಲದೆ ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ, ಬಿಹಾರ ರಾಜ್ಯಗಳ ಮಕ್ಕಳು ಕೂಡ ಇಲ್ಲಿ ಓದುತ್ತಿದ್ದಾರೆ. ಹೊರ ರಾಜ್ಯದ ಮಕ್ಕಳಿಗೆ ಕನ್ನಡ ಕಲಿಸಲು ಶಿಕ್ಷಕರು ವಿಶೇಷ ಶ್ರಮ ವಹಿಸುತ್ತಿದ್ದಾರೆ.
1960 ರಲ್ಲಿ 1 ರಿಂದ 7ನೇ ತರಗತಿ ಹೊಂದಿದ್ದ ಶಾಲೆ 2017 ರಲ್ಲಿ 8ನೇ ತರಗತಿವರೆಗೆ ಉನ್ನತೀಕರಣಗೊಂಡಿದೆ. 2023-24 ರಲ್ಲಿ ಪಿಎಂ ಶ್ರೀ (ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ) ಶಾಲೆಯಾಗಿ ಆಯ್ಕೆಯಾದ ನಂತರ ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಸೌಲಭ್ಯವನ್ನೂ ಕಲ್ಪಿಸಲಾಗಿದೆ.
ಆದರೆ ಶಾಲೆಯಲ್ಲಿ ಕ್ರೀಡಾ ಮೈದಾನ ಇಲ್ಲದಿರುವುದು ಒಂದು ದೊಡ್ಡ ಕೊರತೆ.ಹಾಗಂತಾ ಮಕ್ಕಳಿಗೆ ಆಟೋಟಕ್ಕೇನೂ ಶಿಕ್ಷಕರು ಕಡಿಮೆ ಮಾಡಿಲ್ಲ.
ಸಮೀಪದ ಕೆಂಪೇಗೌಡ ಕ್ರೀಡಾಂಗಣ ಮತ್ತು ಪಾರ್ಕ್ಗಳಲ್ಲಿ ಮಕ್ಕಳಿಗೆ ಕ್ರೀಡಾ ಚಟುವಟಿಕೆ ನಡೆಸಲಾಗುತ್ತಿದೆ.
ನಮ್ಮ ಶಾಲೆಗೆ ಸ್ಥಳೀಯ ಮಕ್ಕಳು ಮಾತ್ರವಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳ ಮಕ್ಕಳು ಹುಡುಕಿಕೊಂಡು ಬಂದು ದಾಖಲಾಗುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಎಲ್ಲ ಶಿಕ್ಷಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕ ವೈ.ಇ. ಲೋಹಿತೇಶ್ ಹೆಮ್ಮೆಯಿಂದ ಹೇಳುತ್ತಾರೆ.
ಈ ಶಾಲೆ ಹೀಗೆಯೇ ಇನ್ನೂ ಮುಂದುವರಿದು ಇಡೀ ರಾಜ್ಯಕ್ಕೆ ಮಾದರಿಯಾಗಲಿ.
