ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬೇಟೆಗಾರರೆಂದು ಆರೋಪಿಸಲಾದ ವ್ಯಕ್ತಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಅರಣ್ಯ ಇಲಾಖೆ ತನ್ನ ಪ್ರಾಥಮಿಕ ಹೇಳಿಕೆಯಲ್ಲಿ ಮೃತರು ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಬೇಟೆಯಾಡುತ್ತಿದ್ದರು ಹಾಗೂ ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಈ ಆರೋಪವನ್ನು ತಳ್ಳಿಹಾಕಿ, ಮೃತರು ರೈತರು ಮತ್ತು ಜಾನುವಾರುಗಳನ್ನು ಹುಡುಕಲು ಅರಣ್ಯ ಪ್ರದೇಶಕ್ಕೆ ತೆರಳಿದ್ದರು ಎಂದು ಹೇಳುತ್ತಿದ್ದಾರೆ.
ಹಾಗಾಗಿ ಸತ್ಯ ಸಂಗತಿ ಏನು ಎಂಬುದು ಸಂಪೂರ್ಣ, ನಿಷ್ಪಕ್ಷಪಾತ ಮತ್ತು ವೈಜ್ಞಾನಿಕ ತನಿಖೆಯಿಂದ ಮಾತ್ರ ಹೊರಬರಬೇಕು ಎಂದು ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್ ಒತ್ತಾಯಿಸಿದ್ದಾರೆ.
ಕನ್ನಡಾಂಬೆ ರಕ್ಷಣಾ ವೇದಿಕೆ ಯಾವುದೇ ರೀತಿಯ ಅಕ್ರಮ ಬೇಟೆ, ವನ್ಯಜೀವಿ ಹತ್ಯೆ ಅಥವಾ ಅರಣ್ಯ ಕಾನೂನು ಉಲ್ಲಂಘನೆಯನ್ನು ಸಮರ್ಥಿಸುವುದಿಲ್ಲ.ಆದರೆ ಯಾವುದೇ ವ್ಯಕ್ತಿಯ ವಿರುದ್ಧ ಆರೋಪವಿದೆ ಎಂಬ ಕಾರಣಕ್ಕೆ ಕಾನೂನು ಪ್ರಕ್ರಿಯೆಯನ್ನು ಬದಿಗೊತ್ತಿ ಜೀವ ತೆಗೆಯುವುದನ್ನೂ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ವ್ಯಕ್ತಿಯು ಬೇಟೆಗಾರನಾಗಿದ್ದರೆ ಅಥವಾ ಯಾವುದೇ ಅಪರಾಧ ಮಾಡಿದ್ದರೆ, ಆತನ ವಿರುದ್ಧ ಪ್ರಕರಣ ದಾಖಲಿಸಿ, ಸಾಕ್ಷ್ಯ ಸಂಗ್ರಹಿಸಿ, ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಾನೂನಿನ ಪ್ರಕಾರ ಶಿಕ್ಷೆ ಕೊಡಿಸುವುದು ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಕರ್ತವ್ಯವಾಗಿದೆ.
ಅಪರಾಧ ಮಾಡಿದವನು ಯಾರೇ ಆಗಿರಲಿ, ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು; ಆದರೆ ಕಾನೂನಿನ ಪ್ರಕ್ರಿಯೆಯಿಲ್ಲದೆ ಯಾರ ಜೀವವನ್ನೂ ಕಸಿದುಕೊಳ್ಳಬಾರದು ಎಂಬುದು ಕನ್ನಡಾಂಬೆ ರಕ್ಷಣಾ ವೇದಿಕೆಯ ಸ್ಪಷ್ಟ ನಿಲುವಾಗಿದೆ ಎಂದು ರಾಜಶೇಖರ್ ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಯನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳ ಅಧೀನದಲ್ಲಿ ನಡೆಸದೆ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಯಾರು ಯಾವ ಸಂದರ್ಭದಲ್ಲಿ ಗುಂಡು ಹಾರಿಸಿದರು, ಎಷ್ಟು ಗುಂಡುಗಳು ಹಾರಿಸಲಾಯಿತು, ಮೃತರ ಮೇಲೆ ಯಾವ ದಿಕ್ಕಿನಿಂದ ಗುಂಡುಗಳು ತಗುಲಿವೆ, ಸ್ಥಳದಲ್ಲಿ ಎಷ್ಟು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ, ಅವುಗಳಲ್ಲಿ ಗುಂಡು ಹಾರಿಸಲಾಗಿದೆಯೇ, ಬ್ಯಾಲಿಸ್ಟಿಕ್ ಮತ್ತು ಫೊರೆನ್ಸಿಕ್ ಸಾಕ್ಷ್ಯ ಏನು ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕು.
ತನಿಖೆಯಲ್ಲಿ ಪ್ರಾಥಮಿಕವಾಗಿ ಕಾನೂನುಬಾಹಿರವಾಗಿ ಅಥವಾ ಅತಿಯಾದ ಬಲಪ್ರಯೋಗದಿಂದ ಗುಂಡಿನ ದಾಳಿ ನಡೆದಿರುವುದು ಕಂಡುಬಂದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನಿನ ಪ್ರಕಾರ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಮೃತರ ಕುಟುಂಬಸ್ಥರಿಗೆ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆ, ವರದಿ, ತನಿಖೆಯ ಪ್ರಗತಿ ಹಾಗೂ ಇತರ ಕಾನೂನು ಕ್ರಮಗಳ ಬಗ್ಗೆ ಪಾರದರ್ಶಕವಾಗಿ ಮಾಹಿತಿ ನೀಡಬೇಕು. ಕುಟುಂಬದ ಅನುಮತಿ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಕಡೆಗಣಿಸಿ ಯಾವುದೇ ಪ್ರಕ್ರಿಯೆ ನಡೆಸಬಾರದು.
ತನಿಖೆಯಲ್ಲಿ ಮೃತರು ನಿರ್ದೋಷಿಗಳು ಅಥವಾ ಕಾನೂನುಬಾಹಿರ ಗುಂಡಿನ ದಾಳಿಗೆ ಬಲಿಯಾಗಿರುವುದು ದೃಢಪಟ್ಟಲ್ಲಿ, ರಾಜ್ಯ ಸರ್ಕಾರವು ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ತಲಾ 5 ಕೋಟಿ ಪರಿಹಾರ ನೀಡಬೇಕು.
ಮೃತರು ಕುಟುಂಬದ ಮುಖ್ಯ ಆಧಾರವಾಗಿದ್ದರೆ, ಮಾನವೀಯ ಹಾಗೂ ವಿಶೇಷ ಪರಿಹಾರ ಕ್ರಮವಾಗಿ ಕುಟುಂಬದ ಅರ್ಹ ಸದಸ್ಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ನಿರ್ಧಾರ ಕೈಗೊಳ್ಳಬೇಕು, ಇವೇ ಮೊದಲಾದ ಒತ್ತಾಯಗಳನ್ನು ರಾಜಶೇಖರ್ ಮಾಡಿದ್ದಾರೆ.
