ಹೆಚ್.ಡಿ.ಕೋಟೆ: ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳ ಅಮೃತ ಸರೋವರಗಳ ದಂಡೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ಮೂಲಕ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
80ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲ್ಲೂಕಿನ ನಾಗನಹಳ್ಳಿ, ಹೆಬ್ಬಲಗುಪ್ಪೆ, ಚಿಕ್ಕೆರೆಯೂರು, ಸವ್ವೆ, ನೂರಲಕುಪ್ಪೆ, ತುಂಬಸೋಗೆ, ಚಕ್ಕೋಡನಹಳ್ಳಿ ಹಾಗೂ ಅಣ್ಣೂರು ಗ್ರಾ.ಪಂ ವ್ಯಾಪ್ತಿಯ ಅಮೃತ ಸರೋವರ ದಂಡೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಸಸಿ ನೆಟ್ಟು, ನೆರದಿದ್ದವರಿಗೆ ಸಿಹಿ ವಿತರಿಸಿ,ಜಲ ಸಂಕ್ಷರಣೆಯ ಸಂಕಲ್ಪ ಮಾಡಲಾಯಿತು.
ಚಕ್ಕೋಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತೀಯ ಕೆ.ಜಿ.ಹುಂಡಿ ಅಮೃತ ಸರೋವರದ ದಡದಲ್ಲಿ ಅಂಗನವಾಡಿ ಮಕ್ಕಳು ಸ್ವಾತ್ರಂತ್ರ್ಯ ಹೋರಾಟಗಾರರು ಹಾಗೂ ವೀರ ಯೋಧರ ವೇಷ ಭೂಷಣ ಧರಿಸಿ ದೇಶ ಪ್ರೇಮವನ್ನು ಮೆರೆದರು.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಿಷನ್ ಅಮೃತ ಸರೋವರ ಕಾರ್ಯಕ್ರಮದಲ್ಲಿ ಜಲ ಸಂರಕ್ಷಣೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವುದು ಹಾಗೂ ಜಲಕ್ಷಾಮವನ್ನು ನೀಗಿಸುವ ಧ್ಯಯೋದ್ದೇಶದಿಂದ ಹೂಳು ತುಂಬಿದ ಕೆರೆಗಳನ್ನು ಪುನಶ್ಚೇತನಗೊಳಿಸಲಾಯಿತು.
ತಾಲ್ಲೂಕಿನಲ್ಲಿ 10 ಗ್ರಾಮ ಪಂಚಾಯಿತಿಗಳಲ್ಲಿ
ಅಮೃತ ಸರೋವರ ಅಭಿಯಾನದ ಮೂಲಕ 10 ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದರಿಂದ ಬತ್ತಿದ ಕೆರೆಗಳಿಗೆ ಜೀವ ಕಳೆ ಬಂದಿದೆ.
ಕೆರೆಗಳಿಂದ ಸಾವಿರ ಎಕರೆ ಜಮೀನುಗಳಿಗೆ ನೀರು ದೊರೆಯುತ್ತಿದೆ. ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿ ರೈತರ ಜಮೀನಿನ ಬೋರುಗಳು ರೀಚಾರ್ಜ್ ಆಗಿ ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರವಿಚಂದ್ರ ಎಸ್ ತಿಳಿಸಿದರು.
