ನೈಜೀರಿಯಾ: ಈಶಾನ್ಯ ನೈಜೀರಿಯಾದ ಫುಟ್ಬಾಲ್ ಮೈದಾನದಲ್ಲಿ ಏಕಾಏಕಿ ಗುಂಡಿನ ದಾಳಿ ನಡೆದಿದ್ದು,29 ಮಂದಿ ಬಲಿಯಾಗಿದ್ದಾರೆ.
ಮೈದಾನದಲ್ಲಿ ಜಮಾಯಿಸಿದ್ದ ಯುವಕರನ್ನು ಗುರಿಯಾಗಿಸಿಕೊಂಡು ಈ ಗುಂಡಿನ ದಾಳಿ ನಡೆದಿದೆ, ಇದು ಆಫ್ರಿಕಾದಲ್ಲಿ ಇತ್ತೀಚಿಗೆ ನಡೆದ ಮಾರಕ ದಾಳಿ.
ಕ್ಯಾಮರೂನ್ ಗಡಿಯಲ್ಲಿರುವ ಅಡಮಾವಾ ರಾಜ್ಯದಲ್ಲಿ ಈ ದಾಳಿ ನಡೆದಿದೆ. ಈ ಪ್ರದೇಶವು ಜಿಹಾದಿಗಳು ಮತ್ತು ಸ್ಥಳೀಯ ಕ್ರಿಮಿನಲ್ ಗ್ಯಾಂಗ್ಗಳ ಹಿಂಸಾಚಾರ ಪ್ರದೇಶವಾಗಿದ್ದು, ಇಲ್ಲಿ ಭೂಮಿಗಾಗಿ ನಡೆಯುವ ಕೋಮು ಹಿಂಸಾಚಾರ ಸಾಮಾನ್ಯವಾಗಿ ಬಿಟ್ಟಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಗವರ್ನರ್ ಅಹ್ಮದ್ ಉಮರು ಫಿಂಟಿರಿ, ಗೊಂಬಿ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿ ಗಯಾಕು ಸಮುದಾಯದ ಮೇಲೆ ನಡೆದ ಮಾರಕ ದಾಳಿಯಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.
ಗಯಾಕು ಸಮುದಾಯದ ಜನರು ಫುಟ್ಬಾಲ್ ಮೈದಾನದಲ್ಲಿ ಒಟ್ಟುಗೂಡಿದಾಗ ಬಂದೂಕುಗಳೊಂದಿಗೆ ಪ್ರವೇಶಿಸಿದ ದಾಳಿಕೋರರು ಅವರ ಮೇಲೆ ಗುಂಡಿ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿ ಮಾತ್ರವಲ್ಲದೆ ಅವರು, ಅವರು ಪೂಜಾ ಸ್ಥಳಗಳು, ಮನೆಗಳು ಮತ್ತು ಮೋಟಾರ್ ಸೈಕಲ್ಗಳನ್ನು ಸಹ ಸುಟ್ಟುಹಾಕಿದರು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ನೈಜೀರಿಯಾದ ಈಶಾನ್ಯದಲ್ಲಿ ಸಕ್ರಿಯವಾಗಿರುವ ಬೊಕೊ ಹರಾಮ್ ಉಗ್ರಗಾಮಿಗಳು ಕಾರಣವಾಗಿರಬಹುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ.
ಆದರೆ, ಅದರ ಪ್ರತಿಸ್ಪರ್ಧಿ ಗುಂಪು, ಇಸ್ಲಾಮಿಕ್ ಸ್ಟೇಟ್ನ ಪಶ್ಚಿಮ ಆಫ್ರಿಕಾ ಪ್ರಾಂತ್ಯ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
