ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಹುದ್ದೆಗೆ ಕೆಎಎಸ್ ಅಧಿಕಾರಿ ಎಸ್. ಕುಸುಮಾ ಕುಮಾರಿ ಅವರನ್ನು ನೇಮಕಗೊಳಿಸಿ ಶನಿವಾರವೇ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರ, ಅದೇ ಆದೇಶವನ್ನು ಸೋಮವಾರ ಹಿಂಪಡೆದು ಶಾಕ್ ನೀಡಿದೆ.
ಇದು ಈಗ ಹೊಸ ವಿವಾದ ಹುಟ್ಟುಹಾಕಿದೆ. ಸೋಮವಾರ ಅಧಿಕಾರ ಸ್ವೀಕರಿಸಲು ಸಿದ್ಧತೆ ನಡೆಸಿದ್ದ ಕುಸುಮಾ ಕುಮಾರಿ ಅವರಿಗೆ ಕೊನೆಯ ಕ್ಷಣದಲ್ಲಿ ಆಘಾತ ಕಾದಿತ್ತು.
ಸರ್ಕಾರದ ಈ ದಿಢೀರ್ ಬದಲಾವಣೆ ಹಲವು ಅನುಮಾನಗಳಿಗೆ ಎಡೆ ಮಾಡಿದೆ.ಈ ನಿರ್ಧಾರದ ಹಿಂದೆ ಯಾವ ಒತ್ತಡ ಇದೆಯೊ,
ರಾಜಕೀಯ ಅಥವಾ ಆಡಳಿತಾತ್ಮಕ ಹಸ್ತಕ್ಷೇಪವೇ ಕಾರಣ ಇರಬಹುದೆ ಎಂಬ ಪ್ರಶ್ನೆಗಳು ಎದುರಾಗಿದೆ.
ಅಧಿಕಾರಿಗಳ ವಲಯದಲ್ಲಿಯೂ ಚರ್ಚೆಗಳು ಜೋರಾಗಿವೆ.ಸರ್ಕಾರದಿಂದ ಯಾವುದೇ ಸ್ಪಷ್ಟನೆ ಹೊರಬರದ ಹಿನ್ನೆಲೆಯಲ್ಲಿ, ಈ ನಿರ್ಧಾರ ನಿಗೂಢವಾಗಿದೆ.
ಜತೆಗೆ ಕೆ ಎಸ್ ಒ ಯು ಆಡಳಿತದಲ್ಲಿ ಅನಿಶ್ಚಿತತೆ ಮುಂದುವರಿದಿದೆ. ಮುಂದಿನ ಬೆಳವಣಿಗೆಗಳತ್ತ ಎಲ್ಲರ ಚಿತ್ತ ನೆಟ್ಟಿದ್ದು ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
