ಮದ್ದೂರು : ಪ್ರೀತಿಸಿ ಮದುವೆಯಾಗಿದ್ದಕ್ಕೆ ಹುಡುಗನ ಮನೆಗೆ ಯುವತಿಯ ತಂದೆ ಬೆಂಕಿ ಹಚ್ಚಿ, ಸಂಪೂರ್ಣ ನಾಶವಾದ ಘಟನೆ ತಾಲ್ಲೂಕಿನ ಕೆ.ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಚುಂಚಗಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಯುವತಿಯ ತಂದೆ ಚನ್ನೇಗೌಡ ಅವರಿಗೆ ಸಣ್ಣ ಪುಟ್ಟ ಗಾಯವಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಚುಂಚಗಹಳ್ಳಿ ಗ್ರಾಮದ ವಿನೋದ್ ಪಕ್ಕದ ಮನೆಯ ಯುವತಿ ಕಾವ್ಯಳನ್ನ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ.
ಕಳೆದ ಗುರುವಾರ ಯುವತಿಯ ಮನೆಯವರ ವಿರೋಧದ ನಡುವೆಯೇ ಇಬ್ಬರೂ ವಿವಾಹವಾಗಿದ್ದಾರೆ.
ಈ ಘಟನೆಯಿಂದ ಆಕ್ರೋಶಗೊಂಡ ಯುವತಿಯ ತಂದೆ ಚನ್ನೇಗೌಡ ಶನಿವಾರ ಬೆಳಿಗ್ಗೆ ಯುವಕನ ಮನೆಗೆ ಬೆಂಕಿ ಹಚ್ಚಿದ್ದಾನೆ.
ಈ ವೇಳೆ ಯುವಕನ ಮನೆಯಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ತಕ್ಷಣವೇ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ, ಸ್ಥಳಕ್ಕೆ ಮದ್ದೂರು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಮನೆಯಲ್ಲಿದ್ದ ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಅಡುಗೆ ಸಾಮಗ್ರಿ ಸೇರಿ ಇಡೀ ಮನೆ ಸಂಪೂರ್ಣ ಸುಟ್ಟುಹೋಗಿದೆ.
ಸ್ಥಳಕ್ಕೆ ಮದ್ದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
