ಚಾಮರಾಜನಗರ,ಏ.1: ಚಾಮರಾಜನಗರ ಜಿಲ್ಲೆ ಬೂದಿಪಡಗ ಆನೆ ಶಿಬಿರದಲ್ಲಿ ಒಂಟಿಯಾಗಿದ್ದ ಗಜೇಂದ್ರ ಆನೆಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದಂತೆ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಶಿಬಿರಕ್ಕೆ ರವಾನೆ ಮಾಡಲಾಯಿತು.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಬಾರಿ ಭಾಗಿಯಾಗಿ ರಾಜ್ಯದ ಹೆಮ್ಮೆಯ ಪ್ರತೀಕವಾಗಿದ್ದ ಗಜೇಂದ್ರ ಚಾಮರಾಜನಗರ ಬೂದಿಪಡಗ ಶಿಬಿರದಲ್ಲಿ ಇತ್ತೀಚೆಗೆ ಒಂಟಿಯಾಗಿದ್ದ.
ಸಾಮಾನ್ಯವಾಗಿ ಆನೆಗಳು ಗುಂಪಾಗಿ ವಾಸಿಸುವ ಸೂಕ್ಷ್ಮ ಮನಸ್ಸಿನ ಜೀವಿಗಳು,ಗಜೇಂದ್ರಒಂಟಿತನದಿಂದ ಕೃಶವಾಗಿದ್ದ.
ಕಾಡಿಗೆ ಮೇಯಲು ಬಿಟ್ಟರೆ, ಕಾಡಾನೆಗಳೊಂದಿಗೆ ಕಾದಾಡುವ ಸಾಮರ್ಥ್ಯವನ್ನೂ ಕಳೆದುಕೊಂಡಿದ್ದ, ಹಾಗಾಗಿ ಸುರಕ್ಷಿತ ಆನೆ ಶಿಬಿರಕ್ಕೆ ಗಜೇಂದ್ರನನ್ನು ಸ್ಥಳಾಂತರಿಸಬೇಕು ಎಂದು ಸಾಮಾಜಿಕ ಜಾಲ ತಾಣದಲ್ಲಿ ಅಭಿಯಾನ ನಡೆದಿತ್ತು.
ಜತೆಗೆ ಹಲವರು ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿಯನ್ನೂ ಅರ್ಪಿಸಿದ್ದರು.
ಜನರ ಭಾವನೆಗಳಿಗೆ ಮತ್ತು ಮನವಿಗೆ ಸ್ಪಂದಿಸಿದ ಖಂಡ್ರೆ, ಕೂಡಲೇ ನಿಯಮಾನುಸಾರ ಕ್ರಮ ವಹಿಸುವಂತೆ ಕಳೆದ 26ರಂದು ಲಿಖಿತ ಆದೇಶ ನೀಡಿದ್ದರು.
ಬೂದಿ ಪಡಗದಲ್ಲಿ ಗಜೇಂದ್ರನಿಗೆ ಪೂಜೆ ಸಲ್ಲಿಸಿ, ಇಲಾಖೆಯ ಆನೆ ರಕ್ಷಣೆ ವಾಹನದಲ್ಲಿ ಮತ್ತಿಗೋಡು ಶಿಬಿರಕ್ಕೆ ಕಳುಹಿಸಿಕೊಡಲಾಯಿತು.
ಗಜೇಂದ್ರ ಆನೆಯ ಅಭಿಮಾನಿಗಳು, ಸಾರ್ವಜನಿಕರ ಭಾವನೆಗೆ ಸ್ಪಂದಿಸಿದ ಈಶ್ವರ ಖಂಡ್ರೆ ಅವರಿಗೆ ಸಾಮಾಜಿಕ ತಾಣಗಳಲ್ಲಿ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದ್ದಾರೆ.
