ಮೈಸೂರು: ದಸರಾ ಆಹಾರ ಮೇಳಕ್ಕೆ ಸ್ಟಾಲ್ ಗಳ ಹಂಚಿಕೆ ವಿಚಾರದಲ್ಲಿ ಯಾವುದೇ ತಾರತಮ್ಯ ಅಥವಾ ಅಕ್ರಮ ನಡೆದಿಲ್ಲ ಎಂದು
ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಅವರು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಆಹಾರ ಮೇಳಕ್ಕೆ ಪ್ರತಿ ವರ್ಷ ಅಪಾರ ಬೇಡಿಕೆಯಿದೆ. ದಿನಂಪ್ರತಿ ಲಕ್ಷಾಂತರ ಜನರು ಭೇಟಿ ನೀಡುವುದರಿಂದ ಸಾರ್ವಜನಿಕರಿಗೆ ವಿಭಿನ್ನ ರುಚಿಯ ಆಹಾರ ಸಿಗುವಂತೆ ಮಾಡಲು ಕೆಲವು ಮಾನದಂಡಗಳನ್ನು ಅನುಸರಿಸಿ ಮಳಿಗೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಆಹಾರ ಮೇಳದಲ್ಲಿ ಸ್ಟಾಲ್ ಪಡೆಯಲು 700ಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಆದರೆ ಸ್ಥಳಾವಕಾಶದ ಕೊರತೆಯಿಂದಾಗಿ ಕೇವಲ 80 ರಿಂದ 100 ಮಂದಿಗೆ ಮಾತ್ರ ಅವಕಾಶ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.
ಒಂದೇ ರೀತಿಯ ಆಹಾರದ ಮಳಿಗೆಗಳು ಪುನರಾವರ್ತನೆಯಾಗದಂತೆ ಅರ್ಜಿಗಳನ್ನು ವಿವಿಧ ವರ್ಗಗಳಾಗಿ ವಿಂಗಡಿಸಿ, ಪ್ರತಿ ಕೆಟಗರಿಯಿಂದ ನಿಗದಿತ ಸಂಖ್ಯೆಯ ಸ್ಟಾಲ್ ಗಳನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಆಯ್ಕೆ ಪ್ರಕ್ರಿಯೆಯನ್ನು ರಹಸ್ಯವಾಗಿ ಮಾಡಿಲ್ಲ. ಸುಮಾರು 400 ಅರ್ಜಿದಾರರ ಎದುರೇ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿದೆ. ಹೀಗಾಗಿ ಸಂಪೂರ್ಣ ಪಾರದರ್ಶಕತೆ ಕಾಪಾಡಲಾಗಿದೆ ಎಂದು ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ಅವಕಾಶ ಸಿಗದಿರುವುದು ಅಕ್ರಮದಿಂದಲ್ಲ, ಬದಲಾಗಿ ಅರ್ಜಿಗಳ ಸಂಖ್ಯೆ ಅಧಿಕವಿದ್ದು ಸ್ಟಾಲ್ ಗಳ ಸಂಖ್ಯೆ ಕಡಿಮೆ ಇರುವುದರಿಂದ ಎಂದು ಅವರು ಸ್ಪಷ್ಟವಾಗಿ ಡಿಸಿ ಹೇಳಿದರು.
ನೂರಾರು ಮಂದಿ ಅರ್ಜಿ ಹಾಕಿ ಸೀಮಿತ ಜನರಿಗೆ ಮಾತ್ರ ಅವಕಾಶ ಸಿಕ್ಕಿರುವುದರಿಂದ ಆಯ್ಕೆಯಾಗದವರಿಗೆ ಬೇಸರವಾಗುವುದು ಸಹಜ. ಆದರೆ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸಮರ್ಥಿಸಿದರು.
