ಮೈಸೂರು: ಪುಷ್ಪ ಕೃಷಿ ಇಂದು ಕೃಷಿ ಕ್ಷೇತ್ರದಲ್ಲಿ ಅತ್ಯಂತ ಲಾಭದಾಯಕ ಉದ್ಯಮವಾಗಿ ರೂಪುಗೊಂಡಿದೆ ಎಂದು
ಡಾ. ನಾಗರಾಜ್ ಅವರು ತಿಳಿಸಿದರು.
ಲಯನ್ಸ್ ಕ್ಲಬ್ ಮೈಸೂರು ಅಂಬಾಸಿಡರ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಪುಷ್ಪ ಉದ್ಯಮದ ಮಹತ್ವ ಮತ್ತು ಅದರ ಆರ್ಥಿಕ ಸಾಧ್ಯತೆಗಳ ಕುರಿತು ಡಾ. ನಾಗರಾಜ್ ಅವರು ಸದಸ್ಯರಿಗೆ ಮಾಹಿತಿ ನೀಡಿದರು.
ಪುಷ್ಪ ಉದ್ಯಮ ರೈತರು ಹಾಗೂ ಯುವ ಉದ್ಯಮಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು.
ಪುಷ್ಪ ಉದ್ಯಮದಲ್ಲಿ ಗುಲಾಬಿ, ಮಲ್ಲಿಗೆ, ಜರ್ಬೆರಾ, ಮುಂತಾದ ಹೂಗಳ ಬೆಳವಣಿಗೆ ಹಾಗೂ ಮಾರಾಟದಿಂದ ಉತ್ತಮ ಆದಾಯ ಗಳಿಸಬಹುದಾಗಿದೆ. ಹೂಗಳ ಬೇಡಿಕೆ ಮದುವೆ, ಧಾರ್ಮಿಕ ಕಾರ್ಯಕ್ರಮಗಳು, ಅಲಂಕಾರಿಕ ಉದ್ದೇಶಗಳು ಮತ್ತು ರಫ್ತು ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವುದರಿಂದ ಈ ಕ್ಷೇತ್ರದ ವ್ಯಾಪ್ತಿ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ ಎಂದು ಡಾ.ನಾಗರಾಜ್ ಹೇಳಿದರು.
ಪ್ರಾಂತೀಯ ಅಧ್ಯಕ್ಷ ಐಎಫ್ಎಸ್ ಅಧಿಕಾರಿ ಲಯನ್ ಹೆಚ್.ಸಿ. ಕಾಂತರಾಜು ಅವರು ಮಾತನಾಡಿ ಆಧುನಿಕ ತಂತ್ರಜ್ಞಾನ ಬಳಸಿ ಗ್ರೀನ್ ಹೌಸ್, ಡ್ರಿಪ್ ಇರಿಗೇಷನ್, ಹೈಬ್ರಿಡ್ ಬೀಜಗಳ ಬಳಕೆ ಮೂಲಕ ಉತ್ಪಾದನೆಯನ್ನು ಹೆಚ್ಚಿಸಬಹುದು, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಮತ್ತು ಸಂಗ್ರಹಣಾ ಸೌಲಭ್ಯಗಳ ಮೂಲಕ ರೈತರು ಹೆಚ್ಚು ಲಾಭ ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ಲಯನ್ಸ್ ಅಂಬಾಸಿಡರಸ್ ಸಂಸ್ಥೆಯ ಅಧ್ಯಕ್ಷ ಲಯನ್ ಡಾ.ಅರ್. ಡಿ ಕುಮಾರ್ ಮಾತನಾಡಿ ಸಂಸ್ಥೆಯ ಸದಸ್ಯರು ಗ್ರಾಮೀಣ ಪ್ರದೇಶಗಳಲ್ಲಿ ಪುಷ್ಪ ಉದ್ಯಮವನ್ನು ಉತ್ತೇಜಿಸುವ ಮೂಲಕ ಸ್ವಾವಲಂಬನೆಗೆ ದಾರಿ ಮಾಡಿಕೊಡಬಹುದು ಎಂದು ಅಭಿಪ್ರಾಯಪಟ್ಟರು.
ಯುವಕರಿಗೆ ತರಬೇತಿ, ಮಾರ್ಗದರ್ಶನ ಮತ್ತು ಆರ್ಥಿಕ ನೆರವು ಒದಗಿಸುವಲ್ಲಿ ಲಯನ್ಸ್ ಕ್ಲಬ್ ಮಹತ್ವದ ಪಾತ್ರ ವಹಿಸಬಹುದು ಎಂದು ತಿಳಿಸಿದರು.
ಅಂತರಾಷ್ಟ್ರೀಯ ಕಾರ್ಯಕ್ರಮದ ಪರಿಸರ ಸಂರಕ್ಷಣೆಯ ಕಾರ್ಯಕ್ರಮದ ಅಡಿಯಲ್ಲಿ 9 ದಿನಗಳ ಕಾಲ ಪ್ರತಿನಿತ್ಯ ಪರಿಸರ ಜಾಗೃತಿಯನ್ನು ಉಂಟುಮಾಡುವ ಒಂದೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ (ಪರಿಸರ) ಲಯನ್ ಮಾಕಳ ಶಿವಕುಮಾರ್ ಅವರು ಮಾಹಿತಿ ನೀಡಿದರು
ಇತ್ತೀಚಿಗೆ ಲಯನ್ಸ. ೩೧೭ ಜಿ ಜಿಲ್ಲೆಯ ಚುನಾವಣೆಯಲ್ಲಿ ವಿಜೇತರಾದ ಲಯನ್ ಎಂ ಸಿದ್ದೇಗೌಡರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ಧೇಗೌಡರವರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯ ಪ್ರಯೋಜಕತ್ವವನ್ನು ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟಿ ಎಚ್ ವೆಂಕಟೇಶ್ ಮತ್ತು ಜಿಲ್ಲಾ ಅಧ್ಯಕ್ಷ ಲಯನ್ ಶ್ರೀಧರ್ ವಹಿಸಿದ್ದರು.
ಸಭೆಯಲ್ಲಿ ಕಾರ್ಯದರ್ಶಿ ಕೆ.ಟಿ ವಿಷ್ಣು, ಖಜಾಂಚಿ ಡಾ. ಕಿಶೋರ್, ಜಿಲ್ಲಾಧ್ಯಕ್ಷ ಸಿ.ಆರ್ ದಿನೇಶ್, ಸದಸ್ಯರಾದ ಪ್ರಸನ್ನ ,ಮನು, ರವಿ,ಪುಟ್ಟಸ್ವಾಮಿ, ರಾಮಚಂದ್ರ, ಕರುಣಾಕರ್, ಯಶೋದಮ್ಮ, ಮಲ್ಲಿಕಾರ್ಜುನಪ್ಪ ಭಾಗವಹಿಸಿದ್ದರು.
