ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಒಬ್ಬ ತಂದೆ ಹಣಕ್ಕಾಗಿ ಪುತ್ರನ ಅಪಹರಿಸಿದ ಹೇಯ ಘಟನೆ ನಡೆದಿದೆ.
ಮಗನನ್ನು ಅಪಹರಿಸಿದ ಬಳಿಕ ಆತ ಪತ್ನಿಯ ಬಳಿ 55 ಲಕ್ಷ ರೂ. ಬೇಡಿಕೆ ಇಟ್ಟಿದ್ದು, ತಂದೆಯನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿ, ಬಾಲಕನನ್ನು ರಕ್ಷಿಸಿದ್ದಾರೆ.
ಕುವೆಂಪುನಗರ ನಿವಾಸಿ ರೋಜಾ ಅವರು ಮೊದಲ ಪತಿಗೆ ವಿಚ್ಛೇದನ ನೀಡಿ, 2023ರಲ್ಲಿ ಕೇರಳ ಮೂಲದ ಶರತ್ ರಾಮ್ ಎಂಬಾತನನ್ನು ಎರಡನೇ ಮದುವೆಯಾಗಿದ್ದರು.
ಮೊದಲ ಪತಿಯಿಂದ ಜನಿಸಿದ 11 ವರ್ಷದ ಮಗ ಹೇಮಂತ್ ಗೌಡ ತಾಯಿ ಜೊತೆಯಲ್ಲೇ ವಾಸವಾಗಿದ್ದಾನೆ.
ದಂಪತಿ ನಡುವೆ ಕೌಟುಂಬಿಕ ಕಲಹ ಇದ್ದ ಕಾರಣ ಸೆ.21ರಂದು ಹೇಮಂತ್ ಗೌಡನನ್ನು ಪುಸಲಾಯಿಸಿ ಕರೆದೊಯ್ದಿದ್ದ ಶರತ್ ರಾಮ್, ಪತ್ನಿ ರೋಜಾಗೆ ಕರೆ ಮಾಡಿ 55 ಲಕ್ಷ ರೂ. ಕೊಟ್ಟರೆ ಮಗನನ್ನು ಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಕುರಿತು ರೋಜಾ ನೀಡಿದ ದೂರಿನ ಮೇರೆಗೆ ಕುವೆಂಪುನಗರ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿ, ಆರೋಪಿ ಶರತ್ ರಾಮ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
