ಮೈಸೂರು: ವಿದ್ಯಾರ್ಥಿಗಳು ಕೇವಲ ಪಠ್ಯಕಷ್ಟೇ ಸೀಮಿತವಾಗದೆ ಪಠ್ಯೇತ್ತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ಅರಸು ವಂಶಸ್ಥರಾದ ಹರೀಶ್ ಕಾಂತರಾಜ್ ಅರಸ್ ಅವರು ಹೇಳಿದರು.
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಶೀಮತಿ ಎಂ. ಜಯಲಕ್ಷಮ್ಮಣಿ ಸ್ಮಾರಕ ರಾಜ್ಯಮಟ್ಟದ ಅಂತರ ಕಾಲೇಜು ಸಂಗೀತ ಸ್ಪರ್ಧೆ ಮತ್ತು ಶ್ರೀ ಸಣ್ಣೇಗೌಡ ಸ್ಮಾರಕ ಜಿಲ್ಲಾ ಮಟ್ಟದ ಕನ್ನಡ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಗಾಯಕಿ ಅರ್ಪಿತ ವೇಣು ಅವರು ಮಾತನಾಡಿ, ಕಾಲೇಜು ಹಂತದಲ್ಲಿ ನಾವು ಸ್ಪರ್ಧಿಸುವ ಇಂತಹ ಒಂದೊಂದು ಸ್ಪರ್ಧೆಗಳೇ ನಮ್ಮ ಸಾಧನೆಯ ಮೆಟ್ಟಿಲುಗಳು ಎಂದು ತಿಳಿಸಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ಭಾಸ್ಕರ್ ಕೆ ಎಸ್ ಅವರು ಶ್ರೀಮತಿ ಜಯಲಕ್ಷ್ಮಮ್ಮಣ್ಣಿ ಸಂಗೀತ ಸ್ಪರ್ಧೆ ಹಾಗೂ ದಿವಂಗತ ಶ್ರೀ ಸಣ್ಣೇಗೌಡ ಕನ್ನಡ ಚರ್ಚಾಸ್ಪರ್ಧೆ ನಡೆದು ಬಂದ ಇತಿಹಾಸವನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿತಾ ಅವರು ಕಾಲೇಜಿನ ಸಾಧನೆಯ ಹಾದಿಯನ್ನು ಸ್ಮರಿಸಿ, ವಿದ್ಯಾರ್ಥಿನಿಯರು ಸರ್ವತೋಮುಖ ಅಭಿವೃದ್ಧಿಗಾಗಿ ಹೇಗೆ ಶ್ರಮಿಸಬೇಕು, ಪಠ್ಯದ ಜೊತೆಗೆ ಪಠ್ಯೇತರ ಟುವಟಿಕೆಗಳಲ್ಲಿ ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳುವುದು ಎಂಬುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿವರಾಂಪೇಟೆ ಎಸ್ಬಿಐ ಶಾಖೆಯ ವ್ಯವಸ್ಥಾಪಕರಾದ ಸಿ ಆರ್ ಹೇಮಂತ್ ಕುಮಾರ್, ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಪ್ರೊ.ಭಾಸ್ಕರ್ ಕೆ ಎಸ್, ಖಜಾಂಚಿ ಡಾ.ನಾಗವೇಣಿ ಟಿ, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀ ವೆಂಕಟೇಶ್ ಕೆ, ವಿದುಷಿ ಕೆ ಎನ್ ಶಾರದಾಂಬ, ಚಲನಚಿತ್ರ ನಟ ಹಾಗೂ ನಿರ್ದೇಶಕ ಆನಿಶ್, ಪ್ರೊ. ರಾಘವೇಂದ್ರ ಕರ್ಜೆ ಡಾ.ನಂಜುಂಡಯ್ಯ, ಕಾಲೇಜಿನ ಅಧ್ಯಾಪಕರು ಆಡಳಿತ ವಿಭಾಗದವರು ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸ್ಪರ್ಧೆಗಳಲ್ಲಿ ರಾಜ್ಯದ 23 ಕಾಲೇಜುಗಳ ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಹೇಶ್ ಎನ್ ಅರಸ್ ಅವರು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.
ಎಲ್ಲಾ ವಿಭಾಗಗಳಲ್ಲ ಹೆಚ್ಚಿನ ಅಂಕ ಪಡೆದ ಮೈಸೂರಿನ ಮಹಾರಾಜ ಕಾಲೇಜು, ಸಂಗೀತ ಸ್ಪರ್ಧೆಯ ಪರ್ಯಾಯ ಪಾರಿತೋಷಕ ಹಾಗೂ ಚರ್ಚಾಸ್ಪರ್ಧೆಯ ಪರ್ಯಾಯ ಪಾರಿತೋಷಕ ಮಹಾವೀರ ಬಿ.ಎಡ್ ಕಾಲೇಜು, ಹುಣಸೂರು ಇವರಿಗೆ ಸಂದಿತು.
