ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ಮಂಜೂರಾತಿ ಹಾಗೂ ವರ್ಗಾವಣೆ ಮಾಡಿಸಲು ಲಂಚ ಪಡೆಯಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋಗಳು ಬಿಡುಗಡೆಯಾಗಿ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿದ್ದು, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅಬಕಾರಿ ಇಲಾಖೆಯು ಭ್ರಷ್ಟಾಚಾರದ ಅಪರಾಧಿ ನಂ.1 ಇಲಾಖೆಯಾಗಿದೆ. ಲೈಸೆನ್ಸ್ಗೆ ಲಂಚ, ವರ್ಗಾವಣೆಗೆ ಹಣ ಫಿಕ್ಸ್ ಹೀಗೆ ಮೊದಲಾದ ರೀತಿಯಲ್ಲಿ ಅಕ್ರಮ ನಡೆಯುತ್ತಿದೆ. ವಿಬಿ ಜಿ ರಾಮ್ ಜಿ ಯೋಜನೆಯನ್ನು ವಿರೋಧಿಸಿರುವ ಕಾಂಗ್ರೆಸ್ ನಾಯಕರು ಮಹಾತ್ಮ ಗಾಂಧೀಜಿಯ ಆದರ್ಶಗಳ ಬಗ್ಗೆ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಗಾಂಧೀಜಿಯ ಆದರ್ಶ ಪಾಲಿಸುತ್ತಿಲ್ಲ. ಸರ್ಕಾರಿ ಅಧಿಕಾರಿಗಳ ಕಡೆಯಿಂದ ಮಾಡಿರುವ ವಾಟ್ಸಾಪ್ ಸಂದೇಶದಲ್ಲಿ, ಹುಬ್ಬಳ್ಳಿಯಲ್ಲಿ ವಸತಿ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಹಾಗೂ ಡಿಸಿಎಂ ಭಾಗವಹಿಸುವುದರಿಂದ ಹೆಚ್ಚು ಜನರು ಬರುತ್ತಿದ್ದಾರೆ. ಆದ್ದರಿಂದ ಮದ್ಯದಂಗಡಿಗಳು ಸಾಕಷ್ಟು ಪ್ರಮಾಣದ ಮದ್ಯ ಸಂಗ್ರಹಿಸಿ ಇಟ್ಟುಕೊಂಡು ಮಾರಾಟ ಮಾಡಬೇಕೆಂದು ಅಧಿಕೃತವಾಗಿ ಸೂಚಿಸಲಾಗಿದೆ. ಇದು ಮನೆ ಹಾಳು ಮಾಡುವ ಕಾರ್ಯಕ್ರಮ. ಸಿಎಂ ಸಿದ್ದರಾಮಯ್ಯ ಸಂವೇದನೆಯ ಪಾಠ ಮಾಡುತ್ತಾರೆ. ಮದ್ಯ ಕುಡಿಯಿರಿ ಎಂದು ಹೇಳುವುದೇ ಇವರ ಸಂವೇದನೆ ಎಂದು ಗೇಲಿ ಮಾಡಿದರು.
ಅಬಕಾರಿ ಇಲಾಖೆಯಲ್ಲಿ ನಡೆಯುವ ಹಗರಣದಲ್ಲಿ ಅಧಿಕಾರಿಗಳಿಂದ ಮಂತ್ಲಿ ಫೀಸ್ ಬರುವುದರಿಂದ ಸಚಿವರು ಸುಮ್ಮನಿದ್ದಾರೆ. ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಅಕ್ರಮದ ಕುರಿತು ರಾಹುಲ್ ಗಾಂಧಿಗೆ ದೂರು ನೀಡುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಇಲಾಖೆಯಲ್ಲಿ ಪ್ರತಿ ವರ್ಷ ಟಾರ್ಗೆಟ್ ನೀಡಿ ಹಣ ಸಂಗ್ರಹಿಸಲಾಗುತ್ತದೆ, ಲೈಸೆನ್ಸ್ನಿಂದ ಆರಂಭವಾಗಿ ಎಲ್ಲ ಹಂತದಲ್ಲೂ ಕೈ ಬಿಸಿ ಮಾಡಬೇಕಿದೆ, ಲೈಸೆನ್ಸ್ ನೀಡುವಾಗ ಅಬಕಾರಿ ಡಿಸಿ ಲಂಚ ಪಡೆಯುವುದು ಪತ್ತೆಯಾಗಿದೆ. ಹಿರಿಯ ಅಧಿಕಾರಿಗಳಿಂದ ಕಿರಿಯವರೆಗೂ ಲಂಚ ಕೊಡಬೇಕಿದೆ. ಈ ಕುರಿತು ಮುಖ್ಯಮಂತ್ರಿಗೆ ದೂರು ನೀಡಲಾಗಿದೆ ಎಂದು ಗುರುಸ್ವಾಮಿ ಹೇಳಿದ್ದಾರೆ. ಎರಡು ಸಾವಿರ ಲಿಕ್ಕರ್ ಶಾಪ್ಗಳಿಗೆ ಅವಕಾಶ ನೀಡಿದ್ದು, ಒಂದಕ್ಕೆ 50 ಲಕ್ಷ ರೂ. ಹಾಗೂ ಮತ್ತೊಂದಕ್ಕೆ 1 ಕೋಟಿ ರೂ. ಲಂಚ ಪಡೆಯಲಾಗಿದೆ, ಪ್ರತಿ ತಿಂಗಳ 10 ನೇ ದಿನಾಂಕ ಲಂಚ ನೀಡದಿದ್ದರೆ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಾರೆ. ಗುರುಸ್ವಾಮಿ ಸಿಎಂ ಸಿದ್ದರಾಮಯ್ಯನವರ ವರುಣಾ ಕ್ಷೇತ್ರದವರೇ ಆಗಿದ್ದಾರೆ. ಗುರುಸ್ವಾಮಿ ದೂರು ನೀಡಿದ್ದರೂ ಸಿದ್ದರಾಮಯ್ಯ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.
ಅಬಕಾರಿ ಇಲಾಖೆಯ ಹಗರಣ ಸಂಬಂಧ ಆಡಿಯೋ ಬಂದಿದೆ. ಇದರಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಅವರ ಮಗನ ಮೇಲೆ ಆರೋಪ ಬಂದಿದೆ. ಆದರೂ ನಾನವನಲ್ಲ ಎಂದು ಸಚಿವರು ಹೇಳುತ್ತಾರೆ ಎಂದು ಅಶೋಕ್ ಆರೋಪಿಸಿದರು.
ಜಂಟಿ ಆಯುಕ್ತ ನಾಗರಾಜಪ್ಪ ಹಾಗೂ ವಕೀಲ ರಮೇಶ್ ಎಂಬುವರ ನಡುವೆ ಸಂಭಾಷಣೆ ನಡೆದಿದ್ದು, ಅದರಲ್ಲಿ 18 ಲಕ್ಷ ರೂ.ಗೆ ಬೇಡಿಕೆ ಇಡುತ್ತಿರುವ ಮಾತುಕತೆ ಇದೆ. ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಮಗ ವಿನಯ್ ಅವರಿಗೆ ಲಂಚ ಪಾವತಿಯಾಗಲಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ ಎಂದು ಎಳೆ,ಎಳೆಯಾಗಿ ಅಶೋಕ ತಿಳಿಸಿದರು.
ಮತ್ತೊಬ್ಬ ಹಿರಿಯ ಅಧಿಕಾರಿ ಡಿಸಿ ನಾಗಶಯನ ಲಂಚ ಪಡೆಯುವ ಬಗ್ಗೆ ಆಡಿಯೋದಲ್ಲಿದೆ. ನೀನು ಜೆಡಿಎಸ್ ಕಾರ್ಯಕರ್ತನೇ ಎಂದು ಅಧಿಕಾರಿ ಪ್ರಶ್ನೆ ಮಾಡುತ್ತಾನೆ. ಜೆಡಿಎಸ್ ಕಾರ್ಯಕರ್ತ ಅಲ್ಲದಿದ್ದರೆ ಲಂಚ ಕಡಿಮೆಯಾಗುತ್ತದೆ. ನೀವು ಒಕ್ಕಲಿಗರಾ, ನಿಮ್ಮೂರಿನಲ್ಲಿ ಯಾರೂ ಕುರುಬರು ಇಲ್ಲವೇ ಕುರುಬ ಮುಖಂಡರನ್ನು ಕರೆದುಕೊಂಡು ಮುಖ್ಯಮಂತ್ರಿಯವರ ಮನೆಯವರಿಗೆ ಫೋನ್ ಮಾಡಿಸಿ, ಒಕ್ಕಲಿಗ ಮುಖಂಡರನ್ನು ಕರೆದುಕೊಂಡು ಸಚಿವ ಚಲುವರಾಯ ಸ್ವಾಮಿ ಬಳಿಗೆ ಹೋಗಿ ಒಂದು ಮಾತು ಹೇಳಿಸಿ ಎಂದು ಸಲಹೆ ನೀಡುತ್ತಾನೆ. ಇಂತಹ ಘಟನೆಗಳು ನಡೆಯುವುದರಿಂದಲೇ ಸರ್ಕಾರ ಸರ್ಕಸ್ ಆಗಿದೆ ಎಂದು ಅಶೋಕ್ ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಎಂದಿಗೂ ಜಿಎಸ್ಟಿ ಸಭೆಗೆ ಹೋಗಿಲ್ಲ. ಪ್ರಧಾನಮಂತ್ರಿಯವರು ಕರೆದ ಸಭೆಗೆ ಹಾಜರಾಗಿಲ್ಲ. ಆದರೆ ಇಲ್ಲಿ ಬಂದು ಜಿಎಸ್ಟಿಯಲ್ಲಿ ಅನ್ಯಾಯವಾಗಿದೆ ಎನ್ನುತ್ತಾರೆ.
ಅಬಕಾರಿ ಇಲಾಖೆಯ ಹಗರಣವನ್ನು ಮರೆಮಾಚಲು ಕೇಂದ್ರ ಸರ್ಕಾರವನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಇದರ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ತಿಳಿಸಿದರು.
