ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಶಾಗ್ಯ ಸಮೀಪದ ಹೊಳೆದಟ್ಟಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್ಕೌಂಟರ್ಗೆ ಮೂರು ಮಂದಿ ಬಲಿಯಾಗಿದ್ದಾರೆ.
ಘಟನೆಯ ನಂತರ ಆಕ್ರೋಶಗೊಂಡ ಮೃತರ ಸಂಬಂಧಿಕರು ಅರಣ್ಯ ಇಲಾಖೆಯ ಕಚೇರಿಯನ್ನ ಧ್ವಂಸಗೊಳಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು,ಸ್ಥಳೀಯರು ಆತಂಕಗೊಂಡಿದ್ದಾರೆ.
ಶಾಗ್ಯ ವ್ಯಾಪ್ತಿಯ ದಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡಿಗೆ ನುಗ್ಗಿ ಬೇಟೆಗಾರರು ಕಾಡುಪ್ರಾಣಿಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಗಸ್ತಿನಲ್ಲಿದ್ದ ಕಾವೇರಿ ವನ್ಯಜೀವಿಧಾಮದ ಅರಣ್ಯ ಸಿಬ್ಬಂದಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ತಕ್ಷಣ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸಿಬ್ಬಂದಿ ಬೇಟೆಗಾರರಿಗೆ ಸೂಚಿಸಿದ್ದಾರೆ. ಆದರೆ ಆ ಮೂವರು ಅರಣ್ಯ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ನಡೆಸಿದ ಕೌಂಟರ್ ಫೈರಿಂಗ್ನಲ್ಲಿ ಮೂವರು ಮೃತಪಟ್ಟಿದ್ದಾರೆ.
ಮೃತ ಮೂವರನ್ನು ಹನೂರು ತಾಲೂಕಿನ ತೋಮಿಯರ್ ಪಾಳ್ಯದ ನಿವಾಸಿಗಳಾದ ಕುಮಾರ್, ಆಂಥೋಣಿ ಸ್ವಾಮಿ ಹಾಗೂ ಪೀಟರ್ ಎಂದು ಗುರುತಿಸಲಾಗಿದೆ.
ಎನ್ಕೌಂಟರ್ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಹನೂರು ತಾಲೂಕಿನ ಶಾಗ್ಯ ಉಪ ವಲಯ ಅರಣ್ಯಾಧಿಕಾರಿ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಕುಟುಂಬ ಸದಸ್ಯರು ಆಗಮಿಸಿದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಈ ಬಗ್ಗೆ ಕುಟುಂಬಸ್ಥರು ನಮ್ಮವರು ದನ ಮೇಯಿಸಲು ಹೋಗಿದ್ದರು, ಪ್ರಾಣಿಗಳನ್ನು ಬೇಟೆ ಮಾಡಿದ್ದಾರೆ ಎಂಬುದಕ್ಕೆ ಯಾವ ಸಾಕ್ಷಿ ಇದೆ ಎಂದು ಅಧಿಕಾರಿಗಳನ್ನು ಗೇರಾವ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಅವರು ಕೃಷಿಕರು. ಒಂದು ವೇಳೆ ಬೇಟೆ ಮಾಡಲು ಹೋಗಿದ್ದೇ ಆಗಿದ್ದರೆ ಅವರನ್ನು ಬಂಧಿಸಬೇಕಿತ್ತು,ಯಾಕೆ ಶೂಟ್ ಮಾಡಿದರು, ತರಬೇತಿಯಲ್ಲಿರುವ ಗಾರ್ಡ್ಗಳು ಈ ಕೆಲಸ ಮಾಡಿದ್ದಾರೆ. ನಾವು ಅವರನ್ನು ಕುಟುಂಬದವರಂತೆ ನೋಡುತ್ತೇವೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
