ಬೆಂಗಳೂರು: ಸ್ಯಾಂಡಲ್ವುಡ್ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನ ಕಾನೂನಾತ್ಮಕವಾಗಿ ಅಂತ್ಯಗೊಂಡಿದೆ.
ಕಳೆದ ಹಲವು ವರ್ಷಗಳಿಂದ ಕೋರ್ಟ್ ಅಂಗಳದಲ್ಲಿದ್ದ ವಿಚ್ಛೇದನ ಪ್ರಕರಣವನ್ನ ಇತ್ಯರ್ಥಪಡಿಸಿರುವ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
ಕ್ರೌರ್ಯದ ಆಧಾರದ ಮೇಲೆ ನಟ ದುನಿಯಾ ವಿಜಯ್ ಹಾಗೂ ಪತ್ನಿ ನಾಗರತ್ನಾ ಅವರಿಗೆ ನ್ಯಾ. ಡಿ.ಕೆ ಸಿಂಗ್ ಹಾಗು ಶಾಂತಿಭೂಷಣ್ ಅವರ ವಿಭಾಗೀಯ ಪೀಠ ಡಿವೋರ್ಸ್ ಮಂಜೂರು ಮಾಡಿದ್ದು, ಪತ್ನಿಗೆ 2 ಕೋಟಿ ರೂ. ಜೀವನಾಂಶ ನೀಡಲು ಆದೇಶಿಸಿದೆ.
ಮುಂದಿನ ಮೂರು ತಿಂಗಳ ಒಳಗೆ ಒನ್ಟೈಮ್ ಸೆಟಲ್ಮೆಂಟ್ ಆಗಿ ನಾಗರತ್ನ ಅವರಿಗೆ ಜೀವಾಂಶ ನೀಡಬೇಕು ಹಾಗೂ ಮೂರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನ ದುನಿಯಾ ವಿಜಯ್ ಹೊರಬೇಕೆಂದು ನ್ಯಾಯಾಲಯ ಆದೇಶಿಸಿದೆ.
ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಕೌಟುಂಬಿಕ ಭಿನ್ನಾಭಿಪ್ರಾಯಗಳು ಈ ಹಿಂದೆ ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದವು. ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನ ತಿರಸ್ಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ವಿಜಯ್ ಹೈಕೋರ್ಟ್ ಮೊರೆ ಹೋಗಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ದಂಪತಿಗಳು ಮತ್ತೆ ಒಂದಾಗಿ ಬಾಳಲು ಸಾಧ್ಯವಿಲ್ಲ ಎಂಬ ಅಂಶವನ್ನು ಗಮನಿಸಿ, ಷರತ್ತುಬದ್ಧ ವಿಚ್ಛೇದನ ನೀಡಿತು.
ದುನಿಯಾ ವಿಜಯ್ ಪರ ಹಿರಿಯ ವಕೀಲರಾದ ಎಸ್. ಶ್ರೀವತ್ಸ ಮತ್ತು ಯುಕ್ತ ಅನಿಲ್ ವಾದ ಮಂಡಿಸಿದರು.
