ಮೈಸೂರು: ಪ್ರೀತಿ,ಪ್ರೇಮಕ್ಕೆ ಕಣ್ಣಿಲ್ಲ ಅಂತಾರೆ,ಆದರೆ ಕಿವಿ ಕೇಳ್ಸಲ್ಲ ಮಾತು ಕೂಡಾ ಬರಲ್ಲ ಅದರೂ ಪ್ರೀತಿ,ಪ್ರೇಮಕ್ಕೆ ಒಂದು ಜೀವ ಬಲಿಯಾಗಿದೆ.
ಮಾತೂ ಬರಲ್ಲ, ಕಿವೀನೂ ಕೇಳಲ್ಲ,ಆದರೂ ಮೂವರು ವಿಕಲಚೇತನರು ಪ್ಲ್ಯಾನ್ ಮಾಡಿ ಕೊಲೆ ಮಾಡಿರುವ ಘೋರ ಘಟನೆ ಜಿಲ್ಲೆಯ ನಂಜನಗೂಡು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು,ಇಡೀ ರಾಜ್ಯದ ಗಮನ ಸೆಳೆದಿದೆ.
ಫೆಬ್ರವರಿ 15 ರಂದು ಮನೆಯಿಂದ ನಾಪತ್ತೆಯಾಗಿದ್ದ ವಿಶೇಷ ಚೇತನ ವ್ಯಕ್ತಿ ಸ್ವಾಮಿ(32) ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದಾಗ ಸ್ವಾಮಿಯ ಚಲನವಲನ ಕುಣಿಗಲ್ ತಾಲೂಕಿನ ಅಮೃತೂರು ಭಾಗದಲ್ಲಿ ಅಂತ್ಯಗೊಂಡಿರುವುದು ಗೊತ್ತಾಗಿದೆ.
ಸ್ವಾಮಿ ಪತ್ನಿಗೂ ಮಾತು ಬರುವುದಿಲ್ಲ, ಆಕೆಗೆ ಇಂದಿರಾನಗರದ ಗಂಗಾಧರ ಎಂಬಾತನ ಜೊತೆ ವಿಡಿಯೋ ಕಾಲ್ ಮೂಲಕ ಪರಿಚಯವಾಗಿ, ಮಾತನಾಡುತ್ತಾ ಆತ್ಮೀಯತೆ ಬೆಳೆದು,ನಂತರ ಅದು ಪ್ರೇಮಕ್ಕೆ ತಿರುಗಿತ್ತು.
ಪತ್ನಿಯ ಪ್ರೇಮ ಕೊನೆಗೆ ಪತಿಯ ಜೀವಕ್ಕೆ ಕುತ್ತು ತಂದಿತು.
ಗಂಗಾಧರ, ಶ್ರೀನಿವಾಸ ಹಾಗೂ ದೇವರಾಜ್ ಎಂಬ ಮೂವರು ಸ್ವಾಮಿಯನ್ನು ಪಾರ್ಟಿ ನೆಪದಲ್ಲಿ ಕರೆಸಿ, ಮದ್ಯಪಾನ ಮಾಡಿಸಿ, ನಂತರ ಕೊಲೆ ಮಾಡಿ ಬಾವಿಗೆ ತಳ್ಳಿದರು.
ಪ್ರಕರಣದ ಆರೋಪಿಗಳಿಗೆ ಮಾತು ಬರಲ್ಲ, ಕಿವಿ ಕೇಳಲ್ಲ ಹಾಗಾಗಿ ತನಿಖೆ ಸವಾಲಾಗಿತ್ತು.
ಪೊಲೀಸರು ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಯ ಸಹಾಯ ಪಡೆದು ಸಂಭಾಷಣೆಯ ರಹಸ್ಯ ಬಿಚ್ಚಿಟ್ಟರು.
22 ದಿನಗಳ ನಂತರ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಪತ್ತೆಹಚ್ಚಿದರು. ಗಂಗಾಧರ ಮತ್ತು ಶ್ರೀನಿವಾಸನನ್ನು ಬಂಧಿದ್ದಾರೆ.
ಮತ್ತೊಬ್ಬ ಆರೋಪಿ ದೇವರಾಜ್ ತಲೆಮರೆಸಿಕೊಂಡಿದ್ದು,ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶ್ರೀನಿವಾಸನಿಗೆ ಸ್ವಾಮಿಯ ಪತ್ನಿ ಲತಾ ಜೊತೆ ಮದುವೆಯಾಗುವ ಆಸೆ ಇತ್ತು. ಅದಕ್ಕಾಗಿ ಸ್ವಾಮಿಯನ್ನು ದೂರ ಮಾಡಬೇಕು ಎಂಬ ಉದ್ದೇಶದಿಂದ ಈ ಭೀಕರ ಸಂಚು ರೂಪಿಸಲಾಗಿದೆ ಎಂದು ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ವಿಡಿಯೋ ಕಾಲ್ ಮೂಲಕ ಹುಟ್ಟಿದ ಸ್ನೇಹ ಪ್ರೇಮಕ್ಕೆ ತಿರುಗಿ ಕೊನೆಗೆ ಒಂದು ಜೀವಹಾನಿಯಲ್ಲಿ ಕೊನೆಯಾಗಿದೆ.
