ಮೈಸೂರು: ರಾಜಕುಮಾರ್ ಅವರಿಗೆ ಕನ್ನಡ ಭಾಷೆಯ ಮೇಲೆ ಇದ್ದ ಗೌರವ ಮತ್ತು ಅಭಿಮಾನ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಅಯೂಬ್ ಖಾನ್ ಹೇಳಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ನಟಸಾರ್ವಭೌಮ ಡಾ. ರಾಜಕುಮಾರ್ ಅವರ 97ನೇ ವರ್ಷದ ಜನ್ಮದಿನೋತ್ಸವ ಅಂಗವಾಗಿ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಡಾ. ರಾಜಕುಮಾರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಇಡೀ ಭಾರತದಲ್ಲೇ ರಾಜಣ್ಣ ಅವರು ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿರುವ ನಟನೆಂದು ದಾಖಲೆ ಮಾಡಿದ್ದಾರೆ, ಕನ್ನಡ ಭಾಷೆ, ನೆಲ,ಜಲ ವಿಚಾರಕ್ಕೆ ಧಕ್ಕೆ ಬಂದಾಗ ಧ್ವನಿಯೆತ್ತಿ ಹೋರಾಟದಲ್ಲಿ ಧುಮುಕಿ ಹಲವಾರು ಕನ್ನಡಪರ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದರು ಎಂದು ಅವರು ಸ್ಮರಿಸಿದರು.
ರಾಜಣ್ಣರವರ ನಟನೆಯನ್ನ ನೋಡಿ ಅದೆಷ್ಟೋ ಮಂದಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸನ್ನ ಕಂಡಿದ್ದಾರೆ, ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಅಸ್ಮಿತೆ ಡಾ. ರಾಜಕುಮಾರ್ ಅವರು.
ಮುಂದಿನ ದಿನದಲ್ಲಿ ಡಾ. ರಾಜಕುಮಾರ್ ಅವರ ನೆನಪಿನಲ್ಲಿ ಚಿತ್ರಗೀತೆಗಳ ಕಾರ್ಯಕ್ರಮ ಆಯೋಜಿಸಿ ಸ್ಮರಿಸಲಾಗುವುದು ಎಂದು ಅಯುಬ್ ಖಾನ್ ತಿಳಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಒ ಕೆ. ರುದ್ರೇಶ್, ಕೆ.ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು ಬಸಪ್ಪ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ನಾಗೇಶ್, ನವೀನ್ ಕೆಂಪಿ ಮತ್ತಿತರರು ಹಾಜರಿದ್ದರು.
