ಮೈಸೂರು: ಮೈಸೂರು ದಸರಾ ವೇದಿಕೆಯಲ್ಲಿ
ಗಾನ ಕೋಗಿಲೆ ಎಸ್.ಜಾನಕಿ ಅವರನ್ನ ಸ್ಮರಿಸಿ ಗೌರವ ನಮನ ಸಲ್ಲಿಸಬೇಕೆಂದು
ಅನುರಾಗ ಕ್ರಿಯೇಶನ್ಸ್ ಟ್ರಸ್ಟ್ ಮನವಿ ಮಾಡಿದೆ.
ಮೈಸೂರು ದಸರಾ ನಮ್ಮ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ತಮ್ಮ ಅಮೋಘ ಕಂಠಸಿರಿಯಿಂದ 48 ಸಾವಿರಕ್ಕೂ ಅಧಿಕ ಹಾಡುಗಳ ಮೂಲಕ ವಿಶ್ವೆದೆಲ್ಲೆಡೆ ಜನಮನ ಗೆದ್ದಿರುವ ಗಾನಕೋಗಿಲೆ ಎಸ್. ಜಾನಕಿ ಅಮ್ಮನವರ ಕಲಾ ಸೇವೆಯನ್ನು ಸ್ಮರಿಸಿ, 2026 ರಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಅವರಿಗೆ ಸಾಂಸ್ಕೃತಿಕ ವೇದಿಕೆಯಲ್ಲಿ ವಿಶೇಷ ಗೌರವ ನಮನ ಸಲ್ಲಿಸುವ ಕಾರ್ಯಕ್ರಮಗಳನ್ನು ಸರ್ಕಾರದಿಂದ ಆಯೋಜಿಸಬೇಕೆಂದು ಅನುರಾಗ ಕ್ರಿಯೇಶನ್ಸ್ ಟ್ರಸ್ಟ್ ವತಿಯಿಂದ ಅಪರ ಪ್ರಾದೇಶಿಕ ಆಯುಕ್ತರಾದ ಡಾ. ಪಿ ಶಿವರಾಜು ಅವರಿಗೆ ಟ್ರಸ್ಟ್ ಅಧ್ಯಕ್ಷರಾದ
ಡಾ. ರೇಖಾ ಅರುಣ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಸ್. ಜಾನಕಿ ಅಮ್ಮನವರ ಸ್ತಬ್ಧಚಿತ್ರವನ್ನು ಸಂಬಂಧಪಟ್ಟ ಇಲಾಖೆಯಿಂದ ಪ್ರದರ್ಶಿಸುವುದು, ಅವರ ಪ್ರಸಿದ್ಧ ಗೀತೆಗಳನ್ನು ಒಳಗೊಂಡ ವಿಶೇಷ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು, ಅವರ ಕಲಾ ಜೀವನದ ಬಗ್ಗೆ ಒಂದು ಕಿರು ಪರಿಚಯ, ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಹಾಗೂ ಗೌರವ ಸಮರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಯಿಂದ ಆಯೋಜಿಸುವಂತೆ ಮನವಿ ಮಾಡಿದರು.
ನಾಡಿನ ಹೆಮ್ಮೆಯ ಕಲಾವಿದರಿಗೆ ದಸರಾ – 2026 ರ ವೇದಿಕೆಯ ಮೂಲಕ ಗೌರವ ಸಲ್ಲಿಸುವ ಈ ಅವಕಾಶವನ್ನು ನೀಡಿದಲ್ಲಿ, ಅದು ಕಲಾಭಿಮಾನಿಗಳಿಗೆ ಹಾಗೂ ಸಂಗೀತ ಕ್ಷೇತ್ರಕ್ಕೆ ವಿಶೇಷ ಗೌರವವಾಗಲಿದೆ ಎಂದು ರೇಖಾ ಅರುಣಾ ಹೇಳಿದರು.
ಈ ಸಂದರ್ಭದಲ್ಲಿ ಅರುಣರಾಗ ಕ್ರಿಯೇಷನ್ಸ್ ಕಾರ್ಯದರ್ಶಿ ಗುರುರಾಜ್, ನಿರೂಪಕರಾದ ಅಜಯ್ ಶಾಸ್ತ್ರಿ, ಸಮಾಜ ಸೇವಕ ವಿಕ್ರಮ ಅಯ್ಯಂಗಾರ್, ಗಗನ್ ಗೌಡ ಹಾಗೂ ಮತ್ತಿತರರು ಹಾಜರಿದ್ದರು.
