ಕುಶಾಲನಗರ: ಪೋಷಕರು ಅಪ್ರಾಪ್ತ ಬಾಲಕಿಗೆ ನಿಶ್ಚಿತಾರ್ಥ ನಡೆಸಲು ಮುಂದಾಗಿದ್ದುದನ್ನು ಅಧಿಕಾರಿಗಳು ತಡೆದ ಪ್ರಸಂಗ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.
ಹತ್ತನೇ ತರಗತಿ ಉತ್ತೀರ್ಣಳಾದ 15 ವರ್ಷ ಪ್ರಾಯದ ಬಾಲಕಿಗೆ ಪಿರಿಯಾಪಟ್ಟಣದ ಯುವಕ ನೊಂದಿಗೆ ಕುಟುಂಬಸ್ಥರು ನಿಶ್ಚಿತಾರ್ಥ ನಡೆಸಲು ಮುಂದಾಗಿದ್ದರು.
ಈ ಸಂಬಂಧ ಸಾರ್ವಜನಿಕರಿಂದ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕ್ರಮವನ್ನು ತಡೆದು, ಪೋಷಕರಿಗೆ ಅರಿವು ಮೂಡಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಶ್ರೀದೇವಿ, ಜಿಲ್ಲಾ ಮಕ್ಕಳ ಸಹಾಯವಾಣಿಯ ಯೋಗೇಶ್ ಅವರು ಕುಶಾಲನಗರ ಪಟ್ಟಣ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದರು.
