ಚಾಮರಾಜನಗರ: ಜಿಲ್ಲೆಯಲ್ಲಿ ಗೌರಿ ಗಣೇಶ ಹಬ್ಬವು ಶಾಂತರೀತಿಯಿಂದ ನಡೆಯಲು ಎಲ್ಲಾ ಏರ್ಪಾಡುಗಳನ್ನು ಮಾಡಲಾಗಿದ್ದು ಗಣಪತಿ ಪ್ರತಿಷ್ಠಾಪಿಸುವವರು , ನಾಗರಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡುವಂತೆ ಕೋರಲಾಗಿದೆ.
ಜಿಲ್ಲಾದ್ಯಂತ ಗಣಪತಿ ಪ್ರತಿಷ್ಠಾಪನೆ, ಕಾರ್ಯಕ್ರಮಗಳು, ಮೆರವಣಿಗೆ ಸಾಗುವ ಮಾರ್ಗಗಳು ಮತ್ತು ವಿಸರ್ಜನೆ ಸ್ಥಳಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಠಾಣಾ ಹಂತದಲ್ಲಿ, ವೃತ್ತ ವ್ಯಾಪ್ತಿ,ಉಪ ವಿಭಾಗವಾರು ವ್ಯಾಪ್ತಿ ಹಾಗೂ ಜಿಲ್ಲಾ ಮಟ್ಟದಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಜಿಲ್ಲೆಯಾದ್ಯಂತ 7408 ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಗೌರಿ ಗಣೇಶ ಹಬ್ಬದ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಪ್ರತಿಷ್ಠಾಪನೆಯ ಸ್ಥಳ, ಮೆರವಣಿಗೆ ಸಾಗುವ ಸೂಕ್ಷ್ಮ ಪ್ರದೇಶಗಳಲ್ಲಿ ಹಾಗೂ ವಿಸರ್ಜನಾ ಸ್ಥಳಗಳಲ್ಲಿ 150 ಕ್ಕೂ ಹೆಚ್ಚು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ವಹಿಸಲಾಗಿದೆ. ಆಯೋಜಕರು ತಮ್ಮ ಗಣಪತಿ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಹಾಗೂ 24×7 ಅವಧಿಯಲ್ಲೂ ಸ್ವಯಂ ಸೇವಕರನ್ನು ನಿಯೋಜಿಸಿಕೊಳ್ಳಲು ಕೋರಲಾಗಿದೆ.
ವ್ಯಾಪಕವಾದ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲೆಯ ಲಭ್ಯವಿರುವ ಸಿವಿಲ್ ಹಾಗೂ ಸಶಸ್ತ್ರ ದಳದ ಅಧಿಕಾರಿ ಮತ್ತು ಸಿಬ್ಬಂದಿ ಓರ್ವರು ಎಸ್.ಪಿ. ಓರ್ವರು ಅಡಿಷನಲ್ ಎಸ್.ಪಿ. ನಾಲ್ವರು ಡಿ.ಎಸ್.ಪಿ. 14 ಪಿ.ಐ/ಸಿ.ಪಿ.ಐ. 48 ಪಿ.ಎಸ್.ಐ. 128 ಎ.ಎಸ್.ಐ. 360 ಹೆಚ್.ಸಿ.624 ಪಿ.ಸಿ.(06 ಡಿ.ಎ.ಆರ್.ತುಕಡಿಗಳು ಮತ್ತು 02 ಕಮಾಂಡೋ ತುಕಡಿಗಳು) ಜೊತೆಗೆ ಹೆಚ್ಚುವರಿಯಾಗಿ 400 ಗೃಹರಕ್ಷಕರು, 02 ಕೆ.ಎಸ್.ಆರ್.ಪಿ. ತುಕಡಿಗಳು ಸೇರಿದಂತೆ ಒಟ್ಟಾರೆಯಾಗಿ 1640 ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ.
ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೈಟ್ ಬೀಟ್ಗಳು, ಮಾರ್ನಿಂಗ್ ಬೀಟ್ಗಳು ಹಾಗೂ ಈಗಾಗಲೇ ಇರುವ ಅಂತರರಾಜ್ಯ ಚೆಕ್ ಪೋಸ್ಟ್ಗಳ ಜೊತೆಗೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ನಿಯೋಜಿಸಿ ಆಗುಂತಕರು ಹಾಗೂ ಕಿಡಿಗೇಡಿಗಳ ವಿರುದ್ಧ ಹದ್ದಿನ ಕಣ್ಣಿಡಲಾಗಿದೆ.
ಜಿಲ್ಲಾಮಟ್ಟದಲ್ಲಿ ಹಾಗೂ ಸ್ಥಳೀಯವಾಗಿ ಸ್ಥಳೀಯ ಸಂಸ್ಥೆಗಳು, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಕೆ.ಇ.ಬಿ. ಕಂದಾಯ ಇಲಾಖೆಗಳ ಸಹಭಾಗಿತ್ವದಲ್ಲಿ ಸಭೆ ನಡೆಸಿ ಏಕಗವಾಕ್ಷಿ ಯೋಜನೆಯನ್ನು ಅನುಷ್ಠಾನಮಾಡಿದ್ದು ಸೆಪ್ಟೆಂಬರ್12 ರವರೆಗೆ ಜಿಲ್ಲೆಯಾದ್ಯಂತ 964 ಅರ್ಜಿಗಳು ಸ್ವೀಕಾರಗೊಂಡಿವೆ. ಪ್ರತಿಷ್ಠಾಪನೆ ಸಂಬಂಧ ಅಗತ್ಯ ಅನುಮತಿ ಪಡೆದುಕೊಂಡು ವ್ಯವಸ್ಥಿತವಾಗಿ ಈಗಾಗಲೇ ನಿಗಧಿಪಡಿಸಿರುವ ಸ್ಥಳಗಳಲ್ಲಿ ಪ್ರತಿಷ್ಠಾಪನೆ, ಮೆರವಣಿಗೆ ಹಾಗೂ ವಿಸರ್ಜನೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ನಿಗಧಿತ ಮಾರ್ಗ ಬದಲಾಯಿಸಲು ಅವಕಾಶ ಇರುವುದಿಲ್ಲ.
ವಿಸರ್ಜನಾ ಸ್ಥಳಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ನುರಿತ ಈಜುಗಾರರು ಮತ್ತು ಅಗತ್ಯ ಮುಂಜಾಗ್ರತಾ ರಕ್ಷಣಾ ಸಾಮಗ್ರಿಗಳನ್ನು ಬಳಸಿಕೊಂಡು, ವಿಸರ್ಜನೆಯನ್ನು ನಿಗಧಿತ ಕಾಲಮಿತಿಯೊಳಗೆ ಸುರಕ್ಷಿತವಾಗಿ ಮುಕ್ತಾಯ ಮಾಡಬೇಕು.
ಈಗಾಗಲೇ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಸೂಚಿಸಿರುವಂತೆ ವಸತಿ ಪ್ರದೇಶಗಳನ್ನು, ಸೈಲೆಂಟ್ ಝೋನ್ಗಳು (ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶಗಳು), ಇಳಿವು ರಸ್ತೆ/ಸಂಚಾರ ದಟ್ಟಣೆ ಪ್ರದೇಶಗಳು, ಸಮುದಾಯ ಸೂಕ್ಷ್ಮ ಪ್ರದೇಶಗಳು ಹಾಗೂ ಇಡೀ ಜಿಲ್ಲೆಯಾದ್ಯಂತ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಡಿಜೆ ವ್ಯವಸ್ಥೆಗಳು, ಬೇಸ್ ಬೂಸ್ಟರ್ಗಳು, ಮೊಬೈಲ್ ಡಿಜೆ ವಾಹನಗಳು ಹಾಗೂ 75 ಡೆಸಿಬಲ್ ಮೀರಿದ ಶಬ್ದ ವೃದ್ಧಿ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸದರಿ ಆದೇಶ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಉಲ್ಲಂಘನೆಯಾದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಬಳಸದೆ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನೇ ಕಡ್ಡಾಯವಾಗಿ ಪ್ರತಿಷ್ಠಾಪಿಸಬೇಕು ಎಂದು ಸೂಚಿಸಲಾಗಿದೆ.
ಗೌರಿ ಗಣೇಶ ಹಬ್ಬದ ಸಂಬಂಧ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗಾಗಲೀ, ಪೊಲೀಸ್ ಕಂಟ್ರೋಲ್ ರೂಂಗಾಗಲೀ ಅಥವಾ 112 ಗಾಗಲೀ ಕರೆ ಮಾಡಿ ಮಾಹಿತಿ ನೀಡಬೇಕು.
ಗೌರಿ-ಗಣೇಶ ಪ್ರತಿಷ್ಠಾಪನೆ, ಮೆರವಣಿಗೆ ಮತ್ತು ವಿಸರ್ಜನಾ ಸ್ಥಳಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಮತ್ತು ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ಮುತ್ತುರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
