ಮೈಸೂರು,ಏ.1: ಜನಗಣತಿ-2027 ರ ಅಂಗವಾಗಿ ಸಾರ್ವಜನಿಕರು ಸುರಕ್ಷಿತ ವೆಬ್ ಪೋರ್ಟಲ್ ಮೂಲಕ ಸ್ವಯಂ- ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಇದರ ಸದುಪಯೋಗ ಪಡೆದುಕೊಂಡು ಜನಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ಏಪ್ರಿಲ್ 16 ರಿಂದ ಆರಂಭವಾಗಲಿದೆ,ಇದಕ್ಕೂ ಮುನ್ನ ಅಮನದರೆ ಇಂದಿನಿಂದ ಏ.15 ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸ್ವಯಂ ಗಣತಿಗಾಗಿ ವೆಬ್ ಸೈಟ್ ವಿಳಾಸ www.se.census.gov.in ಬಳಸಿಕೊಂಡು ಲಾಗ್ ಇನ್ ಆಗಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಸಂಬಂಧ ಕೇಳಲಾಗುವ 33 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ಸ್ವಯಂ ಗಣತಿ ಮಾಹಿತಿಯನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ SMS ಮತ್ತು ಈ ಮೇಲ್ ಪೊರ್ಟಲ್ ಗೆ ರೆಫರೆನ್ಸ್ ಐ.ಡಿ ಸ್ವೀಕೃತವಾಗುತ್ತದೆ.
ಗಣತಿದಾರರು ಮನೆಗೆ ಭೇಟಿ ನೀಡಿದಾಗ ರೆಫರೆನ್ಸ್ ಐ.ಡಿ ನೀಡುವ ಮೂಲಕ ಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
ಒಂದು ವೇಳೆ ರೆಫರೆನ್ಸ್ ಐ.ಡಿ ನೀಡದಿದ್ದಾರೆ ಗಣತಿದಾರರು ಮೊದಲಿನಿಂದಲೂ ಎಲ್ಲಾ ಪ್ರಶ್ನೆಗಳನ್ನು ಕೇಳಿ ಹೊಸದಾಗಿ ಗಣತಿ ಮಾಡಬೇಕಿದೆ.ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವುದರಿಂದ ಗಣತಿದಾರರು ಬಂದಾಗ ಆಗುವ ಸಮಯ ವ್ಯಯವನ್ನು ತಪ್ಪಿಸಬಹುದಾಗಿದೆ. ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
