ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಗೆ ಅರಮನೆ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಆನೆಗಳು ತಂಗಿರುವ ಶೆಡ್ ಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ.
ಆಗಸ್ಟ್ 28 ರಂದು ಜಯಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶ ಮಾಡಿರುವ ಒಂಬತ್ತು ಆನೆಗಳ ವಾಸ್ತವ್ಯಕ್ಕೆ ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯ ಹಾಗೂ ಭುವನೇಶ್ವರಿ ದೇವಾಲಯದ ಆವರಣದ ಶೆಡ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಗಜಪಡೆಯಲ್ಲಿ ಶ್ರೀಕಂಠ, ಮಹೇಂದ್ರ, ಧನಂಜಯ, ಪ್ರಶಾಂತ, ಏಕಲವ್ಯ, ಗೋಪಿ, ಶ್ರೀರಾಮ, ಕಾವೇರಿ ಮತ್ತು ಲಕ್ಷ್ಮಿ ಸೇರಿದಂತೆ ಒಂಬತ್ತು ಆನೆಗಳಿದ್ದು, ಶೆಡ್ ಹಾಗೂ ಆನೆಗಳಿಗೆ ಆಹಾರ ತಯಾರು ಮಾಡುವ ಸ್ಥಳ ಸೇರಿದಂತೆ ಒಟ್ಟು 10 ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಈ ಸಿಸಿಟಿವಿ ಮೂಲಕ 24 ಗಂಟೆಗಳ ಕಾಲ ಆನೆಗಳ ಚಲನವಲನ ಹಾಗೂ ಆನೆಗಳ ಬಳಿ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುದರ ಮೇಲೆ ನಿಗಾ ವಹಿಸಲಾಗುತ್ತಿದೆ. ಅಲ್ಲದೆ ಆನೆಗಳ ಫೋಟೋ, ವಿಡಿಯೋ ತೆಗೆಯದಂತೆ ನಿರ್ಬಂಧ ವಿಧಿಸಲಾಗಿದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಗಜಪಡೆಯನ್ನು ಜಂಬೂಸವಾರಿ ತಾಲೀಮಿಗೆ ಕರೆದೊಯ್ಯುವ ವೇಳೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಈ ಸ್ಥಳದಲ್ಲೂ ಸಿಸಿಟಿವಿ ಅಳವಡಿಸಲಾಗಿದ್ದು, ಸಾರ್ವಜನಿಕರು ಆನೆಗಳಿಗೆ ಆಹಾರ ನೀಡದಂತೆ ನಿರ್ಬಂಧಿಸಲಾಗಿದೆ.
ಗಜಪಡೆ ವಾಸ್ತವ್ಯದ ಸ್ಥಳದಲ್ಲಿ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗಜಪಡೆಯ ರಕ್ಷಣೆಗೆ ನಿಯೋಜಿಸಲಾದ ವಿಶೇಷ ತಂಡ 24 ಗಂಟೆಯೂ ಸಿಸಿಟಿವಿ ಕಣ್ಗಾವಲಿನೊಂದಿಗೆ ಕಾರ್ಯನಿರ್ವಹಿಸಲಿವೆ.
