ಮೈಸೂರು: ಸ್ಯಾಂಟ್ರೋ ಕಾರು ಹಾಗೂ ಬೈಕ್ ಡಿಕ್ಕಿಯಾಗಿ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ನಂಜನಗೂಡು ತಾಲೂಕು, ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೈಕ್ ಸವಾರ ಭರತ್ ಕುಮಾರ್ ಸ್ಥಳದಲ್ಲೇ ಮೃತಪಟ್ಟರೆ,ಹಿಂಬದಿ ಸವಾರ ಚೇತನ್ ಗಂಭೀರವಾಗಿ ಗಾಯಗೊಂಡು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯಡಿಯಾಲ ಹಾಗೂ ಬೇಗೂರು ಮಧ್ಯೆ ಈರೇಗೌಡನ ಹುಂಡಿ ಮತ್ತು ಹೊಸವೀಡು ಗ್ರಾಮದ ಗೇಟ್ ಬಳಿ ಭರತ್ ಕುಮಾರ್ ಹಾಗೂ ಚೇತನ್ ನಂಬರ್ ಪ್ಲೇಟ್ ಇಲ್ಲದ ಯಮಾಹಾ ಬೈಕ್ ನಲ್ಲಿ ತೆರಳುತ್ತಿದ್ದರು,ಆಗ ಸ್ಯಾಂಟ್ರೋ ಕಾರು ವೇಗವಾಗಿ ಬಂದು ಬೈಕ್ ಗೆ ಢಿಕ್ಕಿ ಹೊಡೆದ ಕಾರಣ ಭರತ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಸ್ಯಾಂಟ್ರೋ ಕಾರನ್ನ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
