ಅಮೆರಿಕ: ಭಾರತದ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಹೊಸ ಸುಂಕ ಕ್ರಮಗಳನ್ನು ರದ್ದುಗೊಳಿಸಿ ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮಾತನಾಡಿರುವ ಟ್ರಂಪ್, ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಭಾರತದ ಜೊತೆಗಿನ ನನ್ನ ಬಾಂಧವ್ಯ ಅದ್ಭುತವಾಗಿದೆ, ಜೊತೆಗೆ ಭಾರತದೊಂದಿಗೆ ನಾವು ವ್ಯಾಪಾರ ಮಾಡುತ್ತಿದ್ದೇವೆ, ನನ್ನ ಮನವಿ ಮೇರೆಗೆ ರಷ್ಯಾ ಜೊತೆಗಿನ ವ್ಯಾಪಾರದಿಂದ ಭಾರತ ಹಿಂದೆ ಸರಿದಿದೆ ಎಂದು ಟ್ರಂಪ್ ಹೇಳಿದ್ದಾರೆ.
ಪ್ರತಿ ತಿಂಗಳು 25 ಸಾವಿರ ಜನ ಸಾಯುತ್ತಿರುವ ಯುದ್ಧವನ್ನು ನಿಲ್ಲಿಸಲು ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ತಿಳಿಸಿದ್ದೆವು. ಅದರಂತೆ ಭಾರತವು ತೈಲ ಖರೀದಿಯನ್ನು ನಿಲ್ಲಿಸಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರ ಜೊತೆಗಿನ ನನ್ನ ಸ್ನೇಹವು ಉತ್ತಮವಾಗಿದೆ, ಸುಂಕದ ಮೂಲಕ ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಸುಂಕ ಇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಟ್ರಂಪ್,ಏನೂ ಬದಲಾಗಲ್ಲ. ಭಾರತ ಸುಂಕ ಪಾವತಿಸುತ್ತದೆ, ನಾವು ಪಾವತಿಸುವುದಿಲ್ಲ. ಇದ ಈ ಹಿಂದೆ ಹೇಗಿತ್ತೋ ಅದಕ್ಕೆ ವಿರುದ್ಧವಾಗಿದೆ.
ಪ್ರಧಾನಿ ಮೋದಿ ಒಬ್ಬ ಮಹಾನ್ ವ್ಯಕ್ತಿ ಎಂದು ಭಾವಿಸುತ್ತೇನೆ. ಮೋದಿ ಅವರು ಅಮೆರಿಕದ ವಿಷಯದಲ್ಲಿ ವಿರೋಧಿಸುತ್ತಿದ್ದ ಜನರಿಗಿಂತ ಹೆಚ್ಚು ಬುದ್ಧಿವಂತರಾಗಿದ್ದರು. ಆದ್ದರಿಂದ ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದು ಈಗ ನ್ಯಾಯಯುತ ಒಪ್ಪಂದವಾಗಿದೆ ಎಂದು ಟ್ರಂಪ್ ಹೇಳಿದರು.
ಇದೇ ವೇಳೆ ಬೇರೆ ದೇಶಗಳ ಮೇಲೆ ವಿಧಿಸಲಾದ ಸುಂಕಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ವಿರುದ್ಧ ಟ್ರಂಪ್ ಅಸಮಾಧನ ಹೊರಹಾಕಿದರು.
