ಬೆಂಗಳೂರು: ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಪಂಜಾಬ್ನ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನೇತೃತ್ವದ ಸರ್ಕಾರ ಮಾದರಿಯಾಗಿದೆ ಆದರೆ ಇದು ಕರ್ನಾಟಕ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಹೇಳಿದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ಹಾಗೂ ಹೆಚ್ಚುವರಿ ಪ್ರೋತ್ಸಾಹಧನ ನೀಡಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಪಂಜಾಬ್ ಸರ್ಕಾರವು 2025-26ನೇ ಕಬ್ಬು ಅರೆಯುವ ಹಂಗಾಮಿಗೆ ಪ್ರತಿ ಟನ್ಗೆ 685ರೂ ಪ್ರೋತ್ಸಾಹಧನವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ವ್ಯವಸ್ಥೆ ಮಾಡಿದೆ. ಅಲ್ಲದೆ, ಪ್ರತಿ ಟನ್ ಗೆ 4160 ರೂ ರಾಜ್ಯ ಒಪ್ಪಿಗೆಯ ದರವನ್ನು ನಿಗದಿಪಡಿಸುವ ಮೂಲಕ ಕಬ್ಬು ಬೆಳೆಗಾರರ ಆರ್ಥಿಕ ಭದ್ರತೆಗೆ ಆದ್ಯತೆ ನೀಡಿದೆ. ರೈತರಿಗೆ ನೇರವಾಗಿ ಆರ್ಥಿಕ ನೆರವು ನೀಡುವ ಈ ಮಾದರಿಯನ್ನು ಕರ್ನಾಟಕ ಸರ್ಕಾರ ಏಕೆ ಅನುಸರಿಸುತ್ತಿಲ್ಲ ಎಂದು ಕೇಳಿದರು.
ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಹಲವು ಸಚಿವರು , ವಿರೋಧ ಪಕ್ಷದ ಶಾಸಕರು ಹಾಗೂ ರಾಜಕೀಯ ಪ್ರಭಾವಿಗಳು ಸಕ್ಕರೆ ಕಾರ್ಖಾನೆಗಳ ಮಾಲೀಕತ್ವ ಮತ್ತು ಆಡಳಿತದಲ್ಲಿ ಭಾಗಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಹಿತಾಸಕ್ತಿಗಿಂತ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಿತಾಸಕ್ತಿಗೆ ಸರ್ಕಾರ ಮಣೆ ಹಾಕುತ್ತಿದೆಯೇ ಅನುಮಾನ ಮೂಡುತ್ತಿದೆ. ಕಾರ್ಖಾನೆಗಳ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸುವ ಸರ್ಕಾರ ರೈತರ ಬೆವರಿನ ಬೆಲೆಯನ್ನು ನಿರ್ಲಕ್ಷಿಸುತ್ತಿರುವುದು ಖಂಡನೀಯ ಎಂದು ಹೇಳಿದರು
ಹೆಚ್ಚುತ್ತಿರುವ ಕೃಷಿ ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ, ರಸಗೊಬ್ಬರ, ವಿದ್ಯುತ್ ಮತ್ತು ಸಾಗಾಣಿಕೆ ವೆಚ್ಚಗಳನ್ನು ಪರಿಗಣಿಸಿ ರಾಜ್ಯ ಸರ್ಕಾರ ಹೆಚ್ಚುವರಿ ನೆರವು ನೀಡುವುದು ಅತ್ಯಗತ್ಯ ಎಂದು ಒತ್ತಾಯಿಸಿದರು.
ಪಂಜಾಬ್ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ಗೆ ಕನಿಷ್ಠ 1,000 ಹೆಚ್ಚುವರಿ ಪ್ರೋತ್ಸಾಹಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿಸಬೇಕು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಮೊದಲು ರೈತರ ಪರವಾಗಿ ತನ್ನ ಬದ್ಧತೆಯನ್ನು ಸಾಬೀತುಪಡಿಸಲಿ ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ
ಉಪಸ್ಥಿತರಿದ್ದರು.
