ಯಳಂದೂರು: ಯಳಂದೂರು ತಾಲೂಕು, ಹೊನ್ನೂರು ಗ್ರಾಮದಲ್ಲಿ ಮಹಾವನ ಬುದ್ಧವಿಹಾರ ವತಿಯಿಂದ ಬೋಧಿಸತ್ವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೌದ್ಧ ಧಮ್ಮದೀಕ್ಷಾ ಪರಿವರ್ತನಾ ಕಾರ್ಯಕ್ರಮ ವಿಶೇಷವಾಗಿ ಹಮ್ಮಿಕೊಳ್ಳಲಾಯಿತು.
70 ನೇ ಭೀಮ ಧಮ್ಮ ದೀಕ್ಷಾ ಮಹೋತ್ಸವವನ್ನು ಹೊನ್ನೂರು ಗ್ರಾಮದ ಮಹಾವನ ಬುದ್ಧವಿಹಾರ ವತಿಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹೊನ್ನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬುದ್ಧ ರೂಪ ಮತ್ತು ಅಂಬೇಡ್ಕರ್ ಅವರ ಸ್ಥಂಭ್ದ ಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಬೌದ್ಧ ಉಪಾಸಕ ಆರ್. ಗುರು ಮಲ್ಲೇಶ್ ಮಾತನಾಡಿ,
ಭೀಮ ದಮ್ಮ ದೀಕ್ಷಾ ಮಹೋತ್ಸವ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯ ದಿನವಾಗಿದೆ ಎಂದು ಹೇಳಿದರು.
1956ರ ಅಕ್ಟೋಬರ್ 14ರಂದು (ಅಶೋಕ ವಿಜಯದಶಮಿಯ ದಿನ) ಮಹಾರಾಷ್ಟ್ರದ ನಾಗ್ಪುರದ ದೀಕ್ಷಾಭೂಮಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಲಕ್ಷಾಂತರ ಅನುಯಾಯಿಗಳೊಂದಿಗೆ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಈ ಐತಿಹಾಸಿಕ ಘಟನೆಯ ನೆನಪಿಗಾಗಿ ಪ್ರತಿ ವರ್ಷ ಈ ಮಹೋತ್ಸವವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಸಮಾನತೆಯ ಹಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯತೆ, ಜಾತಿ ಪದ್ಧತಿ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಲು ಬೌದ್ಧ ಧರ್ಮವನ್ನು ಆರಿಸಿಕೊಂಡರು
ನಾನು ಹಿಂದೂವಾಗಿ ಹುಟ್ಟಿದ್ದು ನನ್ನ ಕೈಯಲ್ಲಿರಲಿಲ್ಲ, ಆದರೆ ನಾನು ಹಿಂದೂವಾಗಿ ಸಾಯುವುದಿಲ್ಲ ಎಂಬ ತಮ್ಮ ಪ್ರತಿಜ್ಞೆಯನ್ನು ಅಂಬೇಡ್ಕರ್ ಅವರು ಈ ಮೂಲಕ ಈಡೇರಿಸಿದರು ಎಂದು ಹೇಳಿದರು.
ಬಾಬಾಸಾಹೇಬರು ಬೌದ್ಧ ಧರ್ಮ ಸ್ವೀಕರಿಸಿದ ನಂತರ ತಮ್ಮ ಅನುಯಾಯಿಗಳಿಗೆ 22 ಪ್ರತಿಜ್ಞೆಗಳನ್ನು ಬೋಧಿಸಿದರು. ಇದು ಭಾರತದಲ್ಲಿ ದಲಿತ ಬೌದ್ಧ ಚಳವಳಿ ಅಥವಾ ‘ನವಯಾನ’ದ ಉದಯಕ್ಕೆ ಕಾರಣವಾಯಿತು. ಭೀಮ ಧಮ್ಮ ದೀಕ್ಷಾ ಮಹೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ಬುದ್ಧನ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆರ್ ಗುರು ಮಲ್ಲೇಶ್ ಸಲಹೆ ನೀಡಿದರು.
ಪೂಜ್ಯ ಬುದ್ಧರತ್ನ ಬಂತೇಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು,ಯಜಮಾನ್ ಗುರುಪ್ರಸಾದ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಎಂ.ನಿರಂಜನ್, ಗ್ರಾಮ ಪಂಚಾಯತಿಯ ಸತ್ಯ, ಮಾಜಿ ಸದಸ್ಯರಾದ ಚಿನ್ನಪ್ಪ, ರಾಜಶೇಖರ್, ಹೆಚ್. ಸಿ.ಸೋಮಣ್ಣ, ಹೆಚ್. ಜಿ. ನಾಗರಾಜು,ಮಹದೇವಸ್ವಾಮಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರ ರೂಪೇಶ್, ಕುಮಾರ ಸ್ವಾಮಿ,ಮಲ್ಲಿಕ್ ಸಂಘದ ಅಧ್ಯಕ್ಷರು ರವಿಚಂದ್ರ ಹಾಗೂ ಗ್ರಾಮದ ಜನತೆ ಭಾಗವಹಿಸಿದ್ದರು.
