ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿ ಮತ್ತು ಟಾಟಾ ಸಂಸ್ಥೆಯ ನಡುವಿನ 921 ಎಲೆಕ್ಟ್ರಿಕ್ ಬಸ್ಗಳ ಒಪ್ಪಂದದಲ್ಲಿ ಚಾಲಕರನ್ನು ಖಾಸಗಿ ಸಂಸ್ಥೆಯೇ ನೇಮಿಸುತ್ತಿರುವುದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕಳೆದ 18 ವರ್ಷಗಳಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 1,142 ಮಂದಿ ಮೃತಪಟ್ಟಿದ್ದು, ಟಾಟಾ ಸಂಸ್ಥೆಯ ಒಪ್ಪಂದದ ನಂತರ ಕಳೆದ ಮೂರು ವರ್ಷಗಳಲ್ಲಿ 150 ಜನ ಅಪಘಾತಗಳಲ್ಲಿ ಬಲಿಯಾಗಿದ್ದಾರೆ. ಈ ಎಲ್ಲಾ ಸಾವುಗಳಿಗೆ ಸಂಸ್ಥೆ ಹಾಗೂ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ,ಪ್ರತಿ ಕಿಲೋಮೀಟರ್ಗೆ ಪಾವತಿ ಮಾಡುವ ವ್ಯವಸ್ಥೆಯಿಂದ ಅನವಶ್ಯಕವಾಗಿ ಹೆಚ್ಚು ಟ್ರಿಪ್ಗಳನ್ನು ಮಾಡಿ ಹಣ ಮಾಡುವ ದುರುದ್ದೇಶ ಹೊಂದಿರುವ ಟಾಟಾ ಸಂಸ್ಥೆಯು ಅನನುಭವಿ ಚಾಲಕರುಗಳ ಮೇಲೆ ಒತ್ತಡ ಹೇರುತ್ತಿದೆ,ಇದರಿಂದಾಗಿ ಚಾಲಕರು ನಗರದಲ್ಲಿ ಅಡ್ಡಾದಿಡ್ಡಿ ಅಪಾಯಕಾರಿ ಚಾಲನೆ ಮಾಡುತ್ತ ಸಾರ್ವಜನಿಕರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಟಾಟಾ ಸಂಸ್ಥೆಯು ನೇಮಿಸಿಕೊಂಡಿರುವ ಚಾಲಕರ ನೇಮಕಾತಿ, ತರಬೇತಿ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು
ಆಮ್ ಆದ್ಮಿ ಪಕ್ಷವು ಬಿಎಂಟಿಸಿಯೇ ನೇರವಾಗಿ ಚಾಲಕರನ್ನು ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತದೆ ಎಂದು ಹೇಳಿದರು.
ಅಪಘಾತಗಳಲ್ಲಿ ಮೃತಪಟ್ಟ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು ಹಾಗೂ ನಿರ್ಲಕ್ಷ್ಯ, ಬೇಜವಾಬ್ದಾರಿತನ ಹೊಂದಿರುವ ಟಾಟಾ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ವಿ. ಸದಂ
ಒತ್ತಾಯಿಸಿದರು.
ಸಾರ್ವಜನಿಕರ ಜೀವದ ರಕ್ಷಣೆ ಯಾವುದೇ ಒಪ್ಪಂದಕ್ಕಿಂತ ಮುಖ್ಯವಾಗಿದ್ದು, ಸುರಕ್ಷಿತ ಮತ್ತು ಉತ್ತರದಾಯಿತ್ವದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ತಕ್ಷಣ ಖಚಿತಪಡಿಸಬೇಕು ಎಂದು ಹೇಳಿದರು.
