ಬೆಂಗಳೂರು: ಸಿ ಬಿ ಐ ಕೋರ್ಟ್ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಸೇರಿದಂತೆ ಹಿರಿಯ ನಾಯಕರ ಮೇಲಿನ ಅಬಕಾರಿ ಕೇಸ್ ತೀರ್ಪನ್ನು ಸ್ವಾಗತಿಸಿ ಪಕ್ಷದ ಕಾರ್ಯಕರ್ತರು ಕೇಜ್ರಿವಾಲ್ ಕಟೌಟ್ ಹಿಡಿದು ಸಂಭ್ರಮಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ದೆಹಲಿಯ ಎಎಪಿ ಸರ್ಕಾರದಲ್ಲಿ ಯಾವುದೇ ಅಬಕಾರಿ ಹಗರಣಗಳು ಆಗಿರಲಿಲ್ಲ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.
ಆಮ್ ಆದ್ಮಿ ಪಕ್ಷದ ಮೇಲೆ ಸುಳ್ಳು ಹಗರಣದ ಆರೋಪ ಮಾಡಿ ಪಕ್ಷದ ನಿರ್ನಾಮಕ್ಕಾಗಿ ತನ್ನ ಸಾಂವಿಧಾನಿಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಸಿಬಿಐ ಸಂಸ್ಥೆ ವಿರುದ್ಧ ತನಿಖೆ ಕೈಗೊಳ್ಳಬೇಕೆಂದು ನ್ಯಾಯಾಲಯ ಸ್ಪಷ್ಟವಾಗಿ ಆದೇಶ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿಯವರ ಟ್ಯಾಗ್ ಗುಂಪುಗಳಿಂದ ಆಮ್ ಆದ್ಮಿ ಪಕ್ಷವನ್ನು ಭ್ರಷ್ಟಾಚಾರಿಗಳೆಂಬಂತೆ ಬಿಂಬಿಸ ಹೊರಟಿರುವುದಕ್ಕೆ ಅಂತಿಮ ತೆರೆ ಬಿದ್ದಿದೆ ಎಂದು ಎರಡೂ ಪಕ್ಷಗಳಿಗೆ ಟಾಂಗ್ ನೀಡಿದರು.
ಮಾರ್ಚ್ 2022 ರಲ್ಲಿ ಪಂಜಾಬ್ ನಲ್ಲಿ ಜಯಭೇರಿ ಸಾಧಿಸಿದ ಆಮ್ ಆದ್ಮಿ ಪಕ್ಷವು ಕಾಲಿಟ್ಟ ರಾಜ್ಯಗಳಲ್ಲೆಲ್ಲ ಜಯ ಸಾಧಿಸುತ್ತದೆ ಎಂಬ ಭೀತಿಯಿಂದ ಕಾಂಗ್ರೆಸ್ ಮತ್ತು ಬಿಜೆಪಿ ಅಕ್ರಮ ಕೂಟಗಳು ಈ ರೀತಿಯ ಷಡ್ಯಂತ್ರಕ್ಕೆ ಇಳಿದಿದ್ದವು. ಇನ್ನು ಇವುಗಳ ಷಡ್ಯಂತ್ರ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಇಂದು ಭಾರತದ ನ್ಯಾಯಾಂಗ ವ್ಯವಸ್ಥೆ ಈ ತೀರ್ಪಿನ ಮೂಲಕ ತನ್ನ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಯಾವುದೇ ಬೇದ ಭಾವವಿಲ್ಲದೆ ಸತ್ಯದ ಪರ ಇರುತ್ತದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಮುಖ್ಯ ಮಂತ್ರಿ ಚಂದ್ರು ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಭಾರತದ ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣ ಆವರಿಸಿಕೊಂಡು ದುರಾಡಳಿತದಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯನ್ನು ಕುಸಿತಗೊಳಿಸಿ, ರಾಜಕೀಯ ಕ್ಷೇತ್ರವನ್ನೇ ಕಲುಷಿತ ಗೊಳಿಸಿವೆ,ದೇಶದ ಜನತೆ ಈ ಎರಡೂ ಪಕ್ಷಗಳ ವಿರುದ್ಧ ಹೋರಾಡಬೇಕಾದಂತಹ ಸಂದರ್ಭ ಈಗ ಬಂದಿದೆ, ಎಂದು ಮುಖ್ಯಮಂತ್ರಿ ಚಂದ್ರು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ , ಪ್ರಧಾನ ಕಾರ್ಯದರ್ಶಿ, ಸಂಚಿತ್ ಸೆಹ್ವಾನಿ ,ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ , ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ,ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಮುದಿಗೌಡರ್ ಉಪಸ್ಥಿತರಿದ್ದರು.
