ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಆರು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ.
ಹೈವೆಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 13 ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಜಯಮ್ಮ(60), ಯಶೋದಮ್ಮ(60), ಗಂಗಾ(38) ಮೃತರು. ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಗಂಭೀರ ಗಾಯಗಳಾಗಿವೆ.
ಕೆಂಪಮ್ಮ ಎಂಬುವರು ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸ ಲಾಗಿದೆ.
ಸ್ತ್ರೀ ಶಕ್ತಿ ಸಂಘಟನೆ ಚೀಟಿ ಮೂಲಕ ಪ್ರವಾಸದ ಪ್ಲಾನ್ ಮಾಡಿದ್ದ ತಿಪಟೂರಿನ 12 ಜನರ ತಂಡ ಭಾನುವಾರ ಬೆಳಗ್ಗೆ 6 ಗಂಟೆಯ ಪ್ಲೈಟ್ ನಲ್ಲಿ ಕಾಶಿಗೆ ಟಿಕೆಟ್ ಬುಕ್ ಮಾಡಿದ್ದರು.
ಹಾಗಾಗಿ ತಿಪಟೂರಿನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಟಿಟಿ ವಾಹನದ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿದ್ದರು. ಏರ್ಪೋರ್ಟ್ ಟರ್ಮಿನಲ್ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ.
ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್ ರಸ್ತೆಗೆ ಮೊದಲ ಟರ್ನಿಂಗ್ ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಪಾಸ್ ಆಗಿದ್ದ ಟಿಟಿ ವಾಹನ ಮುಂದಿನ ಟರ್ನಿಂಗ್ನಲ್ಲಿ ಯೂಟರ್ನ್ ಪಡೆಯುವ ವೇಳೆ ಲಾರಿ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಟಿಟಿ ವಾಹನದ ಎಡಭಾಗ ಸಂಪೂರ್ಣ ನಜ್ಜುಗಜ್ಜಾಗಿದೆ.
ಮತ್ತೊಂದು ಪ್ರಕರಣದಲ್ಲಿ
ಬೆಂಗಳೂರು ಹೊರವಲಯದ ಬಳಿ ಪಂಚರ್ ಆಗಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಟಾಟಾ ಎಸ್ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ.
ವೈಟ್ಫೀಲ್ಡ್ ನಿವಾಸಿಗಳಾದ ಸುಮಾರು 25 -30 ವಯಸ್ಸಿನ ಮಣಿಕಂಠ, ಸುರೇಶ್, ಶ್ರೀನಿವಾಸ್ ಮೃತ ದುರ್ದೈವಿಗಳು.
ಅತೀ ವೇಗದಲ್ಲಿ ಸಾಗುತ್ತಿದ್ದ ಟಾಟಾ ಏಸ್ ವಾಹನ ಕ್ಯಾಂಟರ್ ಗೆ ಡಿಕ್ಕಿಯಾಗಿದೆ ಇದರಿಂದಾಗಿ ಟಾಟಾ ಏಸ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಚಾಲಕ ಹಾಗೂ ಸಹಾಯಕ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡಿದ್ದ ಇನ್ನೊಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬಂದಿದ್ದ ಕ್ಯಾಂಟರ್ ವಾಹನ, ಪಂಚರ್ ಆಗಿ ಮೇಡಹಳ್ಳಿ ಮೇಲ್ಸೇತುವೆ ಮೇಲೆ ನಿಂತಿತ್ತು, ಕ್ಯಾಂಟರ್ ಚಾಲಕ ವಾಹನದ ಟೈಯರ್ ಬದಲಾಯಿಸಲು ಮುಂದಾಗಿದ್ದಾನೆ. ನಿಂತಿರುವ ಕ್ಯಾಂಟರ್ ಗಮನಿಸದೇ ಅತೀ ವೇಗವಾಗಿ ಬಂದ ಟಾಟಾ ಏಸ್ ವಾಹನ ಭೀಕರವಾಗಿ ಅಪಘಾತಕ್ಕೀಡಾಗಿದೆ.
