ಬೆಂಗಳೂರು: ಕೇಂದ್ರ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಶನಿವಾರ ಬೆಂಗಳೂರಿನ ಬಿಇಎಂಎಲ್ ತಿಪ್ಪಸಂದ್ರ ಕ್ಯಾಂಪಸ್ಗೆ ಭೇಟಿ ನೀಡಿ, ಹೈ ಸ್ಪೀಡ್ ರೈಲು ತಯಾರಿಕೆಗೆ ಮೀಸಲಾಗಿರುವ ಆದಿತ್ಯ ವಿಶೇಷ ಸಂಕೀರ್ಣ ವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹೈ ಸ್ಪೀಡ್ ರೈಲು ತಂತ್ರಜ್ಞಾನವು ಅತ್ಯಂತ ಸಂಕೀರ್ಣ ಮತ್ತು ಉನ್ನತ ಮಟ್ಟದ ತಾಂತ್ರಿಕತೆಯನ್ನು ಒಳಗೊಂಡಿದ್ದು, ಅದರ ಸ್ವದೇಶೀ ಅಭಿವೃದ್ಧಿ ಭಾರತದ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ಹೊಸದಾಗಿ ಉದ್ಘಾಟಿಸಲಾದ ‘ಆದಿತ್ಯ’ ಸಂಕೀರ್ಣವು ಪ್ರಸ್ತುತ ಬಿ-28 ಕೋಚ್ಗಳ ಅಭಿವೃದ್ಧಿಗೆ ವಿನ್ಯಾಸಗೊಳಿಸಲಾಗಿದೆ.
ಹೈ ಸ್ಪೀಡ್ ರೈಲುಗಳ ಪರಿವರ್ತಕ ಶಕ್ತಿಯನ್ನು ಉಲ್ಲೇಖಿಸಿ,ಇವು ಪ್ರಮುಖ ನಗರಗಳ ನಡುವಿನ ದೂರವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುವುದರ ಮೂಲಕ ಅವುಗಳನ್ನು ಒಂದೇ ವಿಸ್ತೃತ ನಗರ ವ್ಯವಸ್ಥೆಯಾಗಿ ರೂಪಿಸುವುದಕ್ಕೆ ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಅವಧಿ ಕೇವಲ 73 ನಿಮಿಷಗಳಿಗೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಮುಂಬೈ–ಬೆಂಗಳೂರು ಸಂಪರ್ಕವನ್ನು ಇನ್ನಷ್ಟು ಬಲಪಡಿಸಲು, ಎರಡು ಹೊಸ ಸೇವೆಗಳ ಪರಿಚಯದ ಬಗ್ಗೆ ಸಚಿವರು ಮಾಹಿತಿ ನೀಡಿದರು.
ಹುಬ್ಬಳ್ಳಿ ಮಾರ್ಗವಾಗಿ ಎಲ್ಎಚ್ಬಿ ಕೋಚ್ಗಳನ್ನು ಒಳಗೊಂಡ ಹೊಸ ಮೇಲ್/ಎಕ್ಸ್ಪ್ರೆಸ್ ರೈಲು ಪರಿಚಯಿಸಲಾಗುವುದು. ಜೊತೆಗೆ, ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ಶೀಘ್ರದಲ್ಲೇ ಕಾರ್ಯಾಚರಣೆಗೆ ಬರಲಿದೆ ಎಂದು ತಿಳಿಸಿದರು.
ಪ್ರಾದೇಶಿಕ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದಿಂದ, ಮಂಗಳೂರು–ಬೆಂಗಳೂರು ನಡುವಿನ ವಂದೇ ಭಾರತ್ ಸೇವೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.
ಹಾಸನ–ಮಂಗಳೂರು ವಿಭಾಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡಿರುವುದು ಹಾಗೂ ಕಡಿದಾದ ಕರಾವಳಿ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಸ್ವಯಂಚಾಲಿತ ತುರ್ತು ಬ್ರೇಕಿಂಗ್ (AEB) ವ್ಯವಸ್ಥೆಗಳನ್ನು ಅಳವಡಿಸಿರುವುದರಿಂದ ತಾಂತ್ರಿಕ ಅಡಚಣೆಗಳು ನಿವಾರಣೆಯಾಗಿವೆ ಎಂದು ಅವರು ವಿವರಿಸಿದರು.
ತಿಪ್ಪಸಂದ್ರ ಘಟಕದ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದ ಸಚಿವರು, ಮುಂದಿನ ಪೀಳಿಗೆಯ ರೋಲಿಂಗ್ ಸ್ಟಾಕ್ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
