ಮೈಸೂರು: ಶಬರಿಮಲೆಗೆ ತೆರಳುತ್ತಿದ್ದ ಕನ್ನಡಿಗರ ವಾಹನದಲ್ಲಿದ್ದ ಕನ್ನಡ ಬಾವುಟ ತೆಗೆಯುವಂತೆ ತಮಿಳುನಾಡಿನ ಕೆಲ ಗುಂಪು ಕನ್ನಡಿಗ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಖಂಡನೀಯ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
ತಮಿಳಿಗರು ಮತ್ತು ಕನ್ನಡಿಗರು ಕರ್ನಾಟಕದಲ್ಲಿ ಸೋದರ ಭಾವದಿಂದ ಬಾಳುತ್ತಿರುವಾಗ, ತಮಿಳುನಾಡಿನಲ್ಲಿನ ಕೆಲವು ಗೂಂಡಾಗಳು ಕನ್ನಡಿಗ ಪ್ರಯಾಣಿಕರನ್ನು ಗುರಿಯಾಗಿಸಿ ಹಲ್ಲೆ ನಡೆಸುವುದು, ಕನ್ನಡಿಗರ ಅಸ್ಮಿತೆಯಾದ ಕೆಂಪು ಹಳದಿ ಬಾವುಟವನ್ನು ಅವಮಾನಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರ್ನಾಟಕ ತಮಿಳುನಾಡು ಗಡಿ ಬಂದ್ ಮಾಡಲು ಚಿಂತನೆ ನಡೆಸುವುದಾಗಿ ತೇಜಸ್ವಿ ಎಚ್ಚರಿಸಿದ್ದಾರೆ.
ತಮಿಳುನಾಡಿನ ಚುನಾವಣೆ ಸನಿಹದಲ್ಲಿರುವಾಗ ಇಂತಹ ಪ್ರಾದೇಶಿಕ ದ್ವೇಷವನ್ನು ಅಸ್ತ್ರವಾಗಿಸಿಕೊಳ್ಳುವ ಹುನ್ನಾರ ಇದರಲ್ಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ತಮಿಳುನಾಡು ಮುಖ್ಯಮಂತ್ರಿಗಳಿಗೆ ಘಟನೆಯ ಕುರಿತು ಕ್ರಮ ಕೈಗೊಳ್ಳುವಂತೆ, ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಆಗ್ರಹಿಸಬೇಕು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.
