ಬೆಂಗಳೂರು: ಸ್ಯಾಂಡಲ್ ವುಡ್ ಗೆ ಬೆಳಿಗ್ಗೇನೆ ಶಾಕಿಂಗ್ ನ್ಯೂಸ್ ಕಾದಿತ್ತು.
ಖ್ಯಾತ ನಟ,ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬುಧವಾರ ಮುಂಜಾನೆ ಮನೆಯಲ್ಲಿದ್ದಾಗಲೇ ದಿಲೀಪ್ ರಾಜ್ ಅವರಿಗೆ ತೀವ್ರ ಹೃದಯಾಘಾತವಾಗಿದೆ.ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತು.ಆದರೆ ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ದಿಲೀಪ್ ರಾಜ್ ಅವರು 2005ರಲ್ಲಿ ಬಿಡುಗಡೆಯಾದ ಬಾಯ್ ಫ್ರೆಂಡ್ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. 2007ರಲ್ಲಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಮಿಲನ ಚಿತ್ರದಲ್ಲಿ ಅಭಿನಯಿಸಿ ಹೆಚ್ಚು ಹೆಸರು ಮಾಡಿದರು.
ಒಂದೆರಡು ವರ್ಷದ ಹಿಂದೆ ಜಿ ಟಿವಿಯಲ್ಲಿ ಪ್ರಸಾರವಾದ ಹಿಟ್ಲರ್ ಕಲ್ಯಾಣ ದಾರವಾಹಿ ಅದ್ಭುತ ಯಶಸ್ಸನ್ನು ತಂದುಕೊಟ್ಟಿತ್ತು.ಹಿಟ್ಲರ್ ಅಂತಾನೆ ಮನೆಮಾತಾಗಿಬಿಟ್ಟಿದ್ದರು.
ಚಿತ್ರರಂಗದ ಜೊತೆಗೆ ಕಿರುತೆರೆಯಲ್ಲಿಯೂ ದಿಲೀಪ್ ರಾಜ್ ತಮ್ಮದೇ ಛಾಪು ಮೂಡಿಸಿದ್ದರು.
ನಂತರ ದಿಲೀಪ್ ರಾಜ್ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ಅವರ ಇತ್ತೀಚಿನ ಚಿತ್ರ ಲವ್ ಮಾಕ್ಟೇಲ್ 3 ಗಮನ ಸೆಳೆದಿದ್ದು, ಇದನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ್ದರು. ಈ ಚಿತ್ರ ಮಾರ್ಚ್ 16ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
‘ಪಾರು’, ‘ನಾ ನಿನ್ನ ಬಿಡಲಾರೆ’ ಧಾರಾವಾಹಿಗಳನ್ನು ಅವರು ನಿರ್ಮಾಣ ಮಾಡಿದ್ದರು.
ಶೇಷಾದ್ರಿಪುರಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ದಿಲೀಪ್ ಕಾಲೇಜು ದಿನಗಳಿಂದಲೇ ನಾಟಕ,ಸಿನೆಮಾ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.
2025ರ ಜನವರಿಯಲ್ಲಿ ಅವರು ತಮ್ಮ ಚಿತ್ರ ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಪೋಸ್ಟರ್ ಹಂಚಿಕೊಂಡಿದ್ದರು. ಚಿತ್ರಕ್ಕೆ ಉತ್ತಮ ವಿಮರ್ಶೆಗಳು ದೊರೆತಿದ್ದರೂ, ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿತ್ತು.
ದಿಲೀಪ್ ರಾಜ್ ಪತ್ನಿ ಕೂಡಾ ನಿರ್ಮಾಪಕಿ.ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಉತ್ತರಹಳ್ಳಿಯಲ್ಲಿರುವ ದಿಲೀಪ್ ನಿವಾಸಕ್ಕೆ ಸ್ಯಾಂಡಲ್ ವುಡ್ ನಟ,ನಟಿಯರು,ಸಹ ಕಲಾವಿದರು, ಹಿರಿಯ ಕಲಾವಿದರು,ನಿರ್ಮಾಪಕರು, ನಿರ್ದೇಶಕರು ದಾವಿಸಿ ಕಂಬನಿ ಮಿಡಿದರು.
