ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುಧಾರಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಮಯ್ಯ ನವವರಿಗೆ ಆಮ್ ಆದ್ಮಿ ಪಕ್ಷದಿಂದ ಬಹಿರಂಗ ಪತ್ರ ಬರೆಯ ಬಹುದುಲಾಗಿದೆ.
ಇತ್ತೀಚಿನ ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಅನೇಕ ಗೊಂದಲಗಳ ನಡುವೆ ಫಲಿತಾಂಶದ ನಂತರ ಸರ್ಕಾರವು ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳಿಗೋಸ್ಕರ ಅನೇಕ ಕಾರ್ಯ ತಂತ್ರಗಳನ್ನು ಒಳಗೊಂಡ ಗ್ಯಾರಂಟಿಗಳನ್ನು ಘೋಷಿಸಿರುವುದರ ಬಗ್ಗೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಿಎಂ ಸಿದ್ದರಾಮಯ್ಯನವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಶಿಕ್ಷಣದ ಭರವಸೆಗಳು ಕೇವಲ ಜಾಹೀರಾತಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ಸಾಂಪ್ರದಾಯಿಕ ರಾಜಕಾರಣ ಹಿಮ್ಮೆಟ್ಟಿ ಭಾರತದಲ್ಲಿ ರಾಜಕೀಯ ಕ್ರಾಂತಿ ತರಲು ಜನಸಿದ ಪಕ್ಷ. ಇಂದು ಅನೇಕ ಪಕ್ಷಗಳು ವಿವಿಧ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳೂ ಸೇರಿದಂತೆ ಆಮ್ ಆದ್ಮಿ ಪಕ್ಷದ ಆಡಳಿತ ಮಾದರಿಯನ್ನು ಅನುಸರಿಸುತ್ತಿರುವುದು ಪ್ರೋತ್ಸಾಹಕರ ಸಂಗತಿ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಪ್ ಆಡಳಿತ ಮಾದರಿಯ ಭರವಸೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದಿದೆ. ದೆಹಲಿಯಲ್ಲಿ ಆರಂಭವಾದ ಶಿಕ್ಷಣ ಸುಧಾರಣೆಗಳು ಈಗ ಕರ್ನಾಟಕದ ಶಿಕ್ಷಣ ನೀತಿಗೂ ಪ್ರಭಾವ ಬೀರುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಚಂದ್ರು ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ 8 ಭರವಸೆಗಳನ್ನು ಘೋಷಿಸುವ ಮೂಲಕ, ಕಾಂಗ್ರೆಸ್ ಸರ್ಕಾರ ದೆಹಲಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಆಪ್ ಶಿಕ್ಷಣ ಮಾದರಿಯ ಪ್ರತಿಯೊಂದು ಹೆಜ್ಜೆಯನ್ನೂ ಅನುಸರಿಸುತ್ತಿದೆ. ಆದರೆ ಇದು ಕೇವಲ ಘೋಷಣೆಗಳು ಸಾಕಾಗುವುದಿಲ್ಲ,
ಕೆಲವು ಅಂಶಗಳ ಬಗ್ಗೆ ತಕ್ಷಣ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಸಮರ್ಪಕ ಹಣಕಾಸು: ದೆಹಲಿಯ ಶಿಕ್ಷಣ ಸಾಧನೆಗೆ ಪ್ರಮುಖ ಕಾರಣ ರಾಜ್ಯದ ಬಜೆಟ್ನ ಸುಮಾರು ಶೇ.25 ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದ್ದು. ಕರ್ನಾಟಕವೂ ಸಹ ಸಮರ್ಪಕ ಹಣಕಾಸು ಹಂಚಿಕೆ ಮಾಡಬೇಕು; ಇಲ್ಲದಿದ್ದರೆ ಭರವಸೆಗಳು ಮಾತಿಗೆ ಮಾತ್ರ ಸೀಮಿತವಗುತ್ತದೆ. ಆದ್ದರಿಂದ, ಸಿದ್ದರಾಮಯ್ಯ ಸರ್ಕಾರ ತಕ್ಷಣವೇ ಅಗತ್ಯವಿರುವಷ್ಟು ಅನುದಾನವನ್ನು ಮೀಸಲಿಡಬೇಕು ಎಂದು ಆಪ್ ಪರವಾಗಿ ಚಂದ್ರು ವಿನಂತಿಸಿದ್ದಾರೆ
ಶಿಕ್ಷಕರ ಸಾಮರ್ಥ್ಯ ವೃದ್ಧಿ: ಶಿಕ್ಷಕರು ಯಾವುದೇ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬು. ಕ್ರಮಬದ್ಧ ತರಬೇತಿ, ನಾಯಕತ್ವ ಅಭಿವೃದ್ಧಿ ಹಾಗೂ ಬೆಂಬಲ ಇಲ್ಲದೆ ಸುಧಾರಣೆ ಸಾಧ್ಯವಿಲ್ಲ. ಆದ್ದರಿಂದ, ಈ ಭರವಸೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಶಿಕ್ಷಕರ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬೇಕು.
ಮೂಲಸೌಕರ್ಯ ಸುಧಾರಣೆ: ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಪರಿವರ್ತನೆ ಪ್ರಮುಖ ಪಾತ್ರವಹಿಸಿತು. ಆದರೆ ಕರ್ನಾಟಕದ ಅನೇಕ ಭಾಗಗಳಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ದುಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ, ಸರ್ಕಾರಿ ಶಾಲೆಗಳು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ಒದಗಿಸಬಲ್ಲವು ಎಂಬ ವಿಶ್ವಾಸ ಪೋಷಕರಲ್ಲಿ ಇಲ್ಲ. ಆದ್ದರಿಂದ, ಕಾಂಗ್ರೆಸ್ ಸರ್ಕಾರ ಜಾಹೀರಾತುಗಳಿಗೆ ಖರ್ಚು ಮಾಡುವುದಕ್ಕಿಂತ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರತಿ ಮಗುವಿಗೂ ಸಮಾನ ಅವಕಾಶ: ಬಹುತೇಕ ಭರವಸೆಗಳು ಕೇವಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮಾತ್ರ ಸೀಮಿತವಾಗಿವೆ. ಒಟ್ಟು 47,000 ಸರ್ಕಾರಿ ಶಾಲೆಗಳ ಪೈಕಿ ಕೆಪಿಎಸ್ ಶಾಲೆಗಳು ಕೇವಲ 900 ಮಾತ್ರ. ನಿಜವಾದ ಸುಧಾರಣೆ ಎಂದರೆ ಎಲ್ಲಾ ಸರ್ಕಾರಿ ಶಾಲೆಗಳಿಗೂ ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸಬೇಕು ಹಾಗೂ ಯಾವುದೇ ಮಗು ಹಿಂದೆ ಬೀಳದಂತೆ ನೋಡಿಕೊಳ್ಳುಬೇಕು.
ಕಲಿಕಾ ಫಲಿತಾಂಶಗಳ ಮೇಲೆ ಗಮನ: ಪಾಸ್ ಮಾರ್ಕ್ಗಳನ್ನು ಕಡಿಮೆ ಮಾಡುವುದು ಅಥವಾ ಗ್ರೇಸ್ ಮಾರ್ಕ್ಗಳನ್ನು ನೀಡುವುದು ಕರ್ನಾಟಕದ ಶಿಕ್ಷಣ ಗುಣಮಟ್ಟ ಕುಸಿದಿರುವುದನ್ನು ಸೂಚಿಸುತ್ತದೆ. ಸರ್ಕಾರವು ಮಾನದಂಡಗಳನ್ನು ಇಳಿಸುವುದಕ್ಕಿಂತ ಕಲಿಕಾ ಮಟ್ಟವನ್ನು ಹೆಚ್ಚಿಸುವತ್ತ ಗಮನಹರಿಸಬೇಕು.
ಸಿದ್ದರಾಮಯ್ಯ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಭರವಸೆಗಳು ನಿಜವಾಗಲು ಅನುಷ್ಠಾನಕ್ಕೆ ಬಂದಾಗಲೇ ಆ ಭರವಸೆಗೆ ಒಂದು ಅರ್ಥ ಇದೆ. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಯಾವುದೇ ಪ್ರಾಮಾಣಿಕ ಪ್ರಯತ್ನಕ್ಕೆ ಆಪ್ ಸಂಪೂರ್ಣ ಬೆಂಬಲ ನೀಡಲು ಬದ್ಧವಾಗಿದೆ, ಅಗತ್ಯವಿದ್ದರೆ ತಜ್ಞರ ಸಲಹೆ ಹಾಗೂ ಸಹಕಾರವನ್ನು ನೀಡಲು ನಾವು ಸಿದ್ಧರಾಗಿದ್ದೇವೆ, ಮೇಲಿನ ವಿನಂತಿಗಳನ್ನು ಸಿದ್ದರಾಮಯ್ಯನವರು ಈಡೇರಿಸುತ್ತಾರೆ ಎಂದು ಆಶಿಸುತ್ತೇವೆ. ಕರ್ನಾಟಕದ ಜನತೆಗೆ ಕೇವಲ ಭರವಸೆಗಳಷ್ಟೇ ಅಲ್ಲ, ಫಲಿತಾಂಶಗಳೂ ಬೇಕು.
ಎಂದು ಮುಖ್ಯಮಂತ್ರಿ ಚಂದ್ರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
