ಬೆಂಗಳೂರು: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಭೂಮಾಪಕರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಬೆಂಬಲ ಸೂಚಿಸಿತು.
ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಭಾಗವಹಿಸಿ ಭೂಮಾಪಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೀತಾರಾಮ ಗುಂಡಪ್ಪ, ರಾಜ್ಯದ ಭೂ ದಾಖಲೆಗಳ ನಿರ್ವಹಣೆ, ಸರ್ವೇ ಕಾರ್ಯ, ಸಾರ್ವಜನಿಕ ಹಾಗೂ ರೈತರ ಜಮೀನು ಸಮಸ್ಯೆಗಳ ಪರಿಹಾರದಲ್ಲಿ ಭೂಮಾಪಕರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿದ್ದರೂ, ಅವರಿಗೆ ಅಗತ್ಯವಾದ ಮೂಲಸೌಕರ್ಯ, ಸಿಬ್ಬಂದಿ ಮತ್ತು ಸೇವಾ ಭದ್ರತೆ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಭೂಮಾಪಕರ ಖಾಲಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಿ ಸಿಬ್ಬಂದಿ ಕೊರತೆಯನ್ನು ನಿವಾರಿಸಬೇಕು,
ಭೂಮಾಪಕರ ಮೇಲಿನ ಅತಿಯಾದ ಕೆಲಸದ ಒತ್ತಡವನ್ನು ಕಡಿಮೆ ಮಾಡಲು ಅಗತ್ಯ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು,
ಸಾರ್ವಜನಿಕರಿಗೆ ವೇಗವಾಗಿ ಮತ್ತು ಪಾರದರ್ಶಕವಾಗಿ ಸೇವೆ ನೀಡಲು ಸರ್ವೇ ಇಲಾಖೆಯನ್ನು ಆಧುನೀಕರಿಸಬೇಕು,
ಭೂಮಾಪಕರ ಸೇವಾ ಭದ್ರತೆ, ಪದೋನ್ನತಿ ಹಾಗೂ ವೇತನ ಸಂಬಂಧಿತ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ರೈತರು ಮತ್ತು ಸಾರ್ವಜನಿಕರು ಭೂ ದಾಖಲೆ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಭೂಮಾಪಕರ ಸಮಸ್ಯೆಗಳನ್ನು ಪರಿಷ್ಕರಿಸುವುದು ಸಾರ್ವಜನಿಕ ಹಿತಾಸಕ್ತಿಗೂ ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಭೂಮಾಪಕರ ಹೋರಾಟವನ್ನು ನಿರ್ಲಕ್ಷಿಸದೇ ಅವರೊಂದಿಗೆ ತಕ್ಷಣ ಮಾತುಕತೆ ನಡೆಸಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷವು ಭೂಮಾಪಕರ ನ್ಯಾಯಸಮ್ಮತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಸದಾ ಜೊತೆಯಾಗಿರುತ್ತದೆ ಎಂದು ಸೀತಾರಾಮ್ ಗುಂಡಪ್ಪ ಭರವಸೆ ನೀಡಿದರು.
